ಕುಶಾಲನಗರ, ಏ 12: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ನಿರ್ಮಾಣ ಗೊಂಡಿರುವ ಕೆಲವು ಬಹುಮಹಡಿ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪಟ್ಟಣದ ಮುಖ್ಯರಸ್ತೆ ಮತ್ತು ಬಡಾವಣೆಗಳಲ್ಲಿ ನಿರ್ಮಾಣ ಗೊಂಡಿರುವ 4 ಕ್ಕೂ ಅಧಿಕ ಬಹು ಮಹಡಿ ಕಟ್ಟಡಗಳ ತೆರವಿಗೆ ಸೂಚನೆ ಬಂದಿರುವದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮಾಹಿತಿ ನೀಡಿದ್ದಾರೆ. ಕುಶಾಲನಗರ ಪಟ್ಟಣದಲ್ಲಿ ಕಳೆದ 2 ವರ್ಷಗಳಿಂದ ಪಟ್ಟಣ ಪಂಚಾಯಿತಿ ಅನುಮತಿ ಪಡೆಯದೆ ಅಕ್ರಮ ಕಟ್ಟಡಗಳು ತಲೆ ಎತ್ತುವದರೊಂದಿಗೆ ಪಂಚಾಯಿತಿಯ ಕಾನೂನು ನಿಯಮಾವಳಿಗಳನ್ನು ಶೇ. 200 ರಷ್ಟು ಉಲ್ಲಂಘನೆ ಮಾಡಿರುವ ಬಗ್ಗೆ ದೃಢಪಟ್ಟಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಜಿಲ್ಲಾಧಿಕಾರಿಗಳಿಗೆ ಕಟ್ಟಡ ತೆರವುಗೊಳಿಸಲು ಅನುಮತಿ ಕೋರಿದ ಹಿನ್ನೆಲೆ ಪ್ರಸಕ್ತ 4 ಅಪಾಯಕಾರಿ ಕಟ್ಟಡ ಗಳನ್ನು ತೆರವುಗೊಳಿಸುವ ಬಗ್ಗೆ ಜಿಲ್ಲಾಧಿ ಕಾರಿಗಳು ಆದೇಶಿಸಿದ್ದಾರೆ.
ಈ ಸಂಬಂಧ ಅಧಿಕಾರಿಗಳ ತಂಡವೊಂದು ನಿಯಮ ಉಲ್ಲಂಘಿಸಿ ನಿರ್ಮಾಣವಾದ ಕಟ್ಟಡಗಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗೆ ವರದಿ ನೀಡಿರುವದನ್ನು ಸ್ಮರಿಸಬಹುದು. ಕುಶಾಲನಗರ ಪಟ್ಟಣದಲ್ಲಿ 2400 ಚದರಡಿ ಜಾಗದಲ್ಲಿ ಪಂಚಾಯಿತಿ ನಿಯಮ ಉಲ್ಲಂಘಿಸಿ 5 ಮಹಡಿ ಕಟ್ಟಡ ವೊಂದು ನಿರ್ಮಾಣಗೊಂಡಿರುವ ವಿಶೇಷತೆ ಕೂಡ ಸ್ಥಳೀಯ ಬಡಾವಣೆಯೊಂದರಲ್ಲಿ ಕಂಡು ಬಂದಿದ್ದು ಈಗಾಗಲೇ ಈ ಕಟ್ಟಡದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.