ಗೋಣಿಕೊಪ್ಪಲು, ಏ. 13: ಅರಣ್ಯ ನಾಶ ತಡೆಗೆ ಇನ್ನಷ್ಟು ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡಾ. ವೆೃ ವಿಶ್ವನಾಥ್ ಶೆಟ್ಟಿ ಅಭಿಪ್ರಾಯ ಪಟ್ಟರು.

ಪೊನ್ನಂಪೇಟೆ ಅರಣ್ಯ ಮಹಾ ವಿಶ್ವವಿದ್ಯಾಲಯ ವನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅರಣ್ಯ ನಾಶದ ವಿರುದ್ಧ ಕ್ರಮದ ಅವಶ್ಯಕತೆ ಇದೆ. ಅರಣ್ಯ ನಾಶಕ್ಕೆ ಮುಂದಾಗುವವರು ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ ಎಂದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ. ಸಿ. ವಾಸುದೇವಪ್ಪ ಮಾತನಾಡಿ, ಪರಿಶ್ರಮ ಇರುವಲ್ಲಿ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಪರಿಶ್ರಮಕ್ಕೆ ಹೆಚ್ಚಿನ ಆದ್ಯತೆ ಕೊಡುವ ಅವಶ್ಯಕತೆ ಇದೆ ಎಂದರು.

ಸಿಇಒ ಚಾರುಲತಾ ಸೋಮಲ್ ಮಾತನಾಡಿ ಆತ್ಮವಿಶ್ವಾಸದ ಮೂಲಕ ಸಾಧನೆಗೆ ದಾರಿ ಕಂಡುಕೊಳ್ಳುವದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು. ಬಿಎಸ್‍ಸಿ ಅರಣ್ಯ ಶಾಸ್ತ್ರ ವಿಭಾಗದ ಕಾಲೇಜು ಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಆಯಿಶ ಅವರಿಗೆ ಕೊಡಗು ವಿಜ್ಞಾನಿಗಳ ವೇದಿಕೆ ನೀಡಿದ ಚಿನ್ನದ ನಾಣ್ಯವನ್ನು ಡಾ. ಸಿ ವಾಸುದೇವಪ್ಪ ಪ್ರದಾನ ಮಾಡಿದರು. ಈ ಸಂದರ್ಭ ಕ್ರೀಡೆಯಲ್ಲಿ ಸಾಧನೆÀಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮಹಾವಿದ್ಯಾಲಯದ ಮಾಹಿತಿ ಹೊತ್ತ ‘ಕಾನನ ಕಗ್ಗ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿನಿಲಯ ಹಾಗೂ ಸಣ್ಣ ಮಕ್ಕಳ ಆಟದ ಮೆೃದಾನವನ್ನು ಉದ್ಘಾಟಿಸಲಾಯಿತು.

ಕಾಲೇಜು ಡೀನ್ ಡಾ. ಚೆಪ್ಪುಡೀರ ಕುಶಾಲಪ್ಪ, ಅರಣ್ಯ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಜಿ ಎಂ ದೇವಗಿರಿ, ಕೃಷಿ ಅರಣ್ಯ ಶಾಸ್ತ್ರ ಮುಖ್ಯಸ್ಥ ಡಾ. ರಾಮಕೃಷ್ಣ ಹೆಗಡೆ, ಅರಣ್ಯ ಉತ್ಪನ್ನ ವಿಭಾಗ ಮುಖ್ಯಸ್ಥ ಎಂ ಎನ್ ರಮೇಶ್, ವಿದ್ಯಾರ್ಥಿ ಕಲ್ಯಾಣ ಸಹಾಯಕ ನಿರ್ದೇಶಕ ಜಡೇಗೌಡ ಉಪಸ್ಥಿತರಿದ್ದರು. ಜೀವಿತ ಪ್ರಾರ್ಥಿಸಿದರು. ಮನು ಸ್ವಾಗತಿಸಿದರು, ಈಶ್ವರÀ ನಿರೂಪಿಸಿದರು.