ಮಡಿಕೇರಿ, ಏ. 13: ವಿಶಿಷ್ಟ, ವಿಭಿನ್ನ ಹಾಗೂ ಶ್ರೀಮಂತಿಕೆಯಿಂದ ಕೂಡಿರುವ ಕೊಡವ ಸಂಸ್ಕøತಿ, ಆಚಾರ-ವಿಚಾರ, ಪದ್ಧತಿ-ಪರಂಪರೆಗಳನ್ನು ಉಳಿಸಿ, ಬೆಳೆಸುವ ಹಾಗೂ ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಕೊಡವ ಹೆರಿಟೇಜ್ ಸೆಂಟರ್ (ಕೊಡವ ಸಾಂಸ್ಕøತಿಕ ಸಮುಚ್ಚಯ) ಯೋಜನೆ ಆಮೆಗತಿಯಿಂದ ಸಾಗುತ್ತಿದ್ದು, ವರ್ಷಗಳು ಐದು ಉರುಳಿದರೂ ಇನ್ನೂ ಕೂಡ ಮೇಲೇಳುವ ಸೂಚನೆ ಕಾಣುತ್ತಿಲ್ಲ. 2012ರಲ್ಲಿ ಕೇಂದ್ರ, ಸಮಾಜಕ್ಕೆ ಸಮರ್ಪಣೆಯಾಗಬೇಕಾಗಿತ್ತಾದರೂ ‘ಇಚ್ಛಾಶಕ್ತಿ’ಯ ಕೊರತೆಯಿಂದಾಗಿ ಇನ್ನೂ ಮೀನಾ-ಮೇಷ ಎಣಿಸುತ್ತಿದೆ.ಕೊಡವರ ಸಂಸ್ಕøತಿ, ಆಚಾರ-ವಿಚಾರಗಳು, ಪದ್ಧತಿ, ಪರಂಪರೆ, ಉಡುಗೆ-ತೊಡುಗೆ, ದಿನನಿತ್ಯ ಬಳಕೆಯಾಗುತ್ತಿದ್ದಂತಹ ಪರಿಕರಗಳು ಮುಂತಾದುವನ್ನು ಒಂದೇ ಸೂರಿನಡಿ ಸಂಗ್ರಹಿಸಿ, ವಿಶ್ವಕ್ಕೆ ಪರಿಚಯಿಸುವದಲ್ಲದೆ ಉಳಿಸಿ-ಬೆಳೆಸುವ ಉದ್ದೇಶದೊಂದಿಗೆ ಸರಕಾರ ಕೊಡವ ಹೆರಿಟೇಜ್ ಸೆಂಟರ್ ಎಂಬ ಯೋಜನೆ ರೂಪಿಸಿತು. ಇದಕ್ಕಾಗಿ ಸೂಕ್ತ ಜಾಗದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಅಂದು ಜಿಲ್ಲಾಧಿಕಾರಿಯಾಗಿದ್ದ ಸುಭೋದ್ ಯಾದವ್ ಅವರು ಗಾಲ್ಫ್ ಮೈದಾನದ ಬಳಿಯ ಕೆ. ನಿಡುಗಡೆ ಗ್ರಾ.ಪಂ.ಗೆ ಸೇರಿದ, ಪ್ರಕೃತಿಯ ಮಡಲು ಎಂದೇ ಹೇಳಬಹುದಾದ ಸ್ಥಳದಲ್ಲಿ 5 ಎಕರೆ ಜಾಗ ಗುರುತಿಸಿ ಒದಗಿಸಿದ್ದರು. ಇದಕ್ಕಾಗಿ ಸರಕಾರ ರೂ. 1.45 ಕೋಟಿ ಹಣ ಕೂಡ ಬಿಡುಗಡೆ ಮಾತಿತ್ತು. ಮೈಸೂರಿನ ಗುತ್ತಿಗೆದಾರ ಹೇಮಶಂಕರ ಅವರು ಗುತ್ತಿಗೆ ಪಡೆದುಕೊಂಡು ಕೆಲಸ ಆರಂಭ ಮಾಡಿದರಾದರೂ ನಂತರದಲ್ಲಿ ನಕಾಶೆ ಬದಲಾವಣೆ, ಮರಳಿನ ಅಭಾವ, ಕಾರ್ಮಿಕರ ಕೊರತೆ ಮುಂತಾದ ಕಾರಣಗಳಿಂದಾಗಿ ಇದುವರೆಗೆ ಪೂರ್ಣಗೊಳ್ಳುವ ಭಾಗ್ಯ ಒದಗಿ ಬಂದಿಲ್ಲ. ಈ ಸಾಲಿನ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವದೆಂದು ಕಾಮಗಾರಿಯ ನಿರ್ವಹಣೆ ಹೊತ್ತಿರುವ ಲೋಕೋಪಯೋಗಿ ಇಲಾಖಾ ಅಭಿಯಂತರರು ಹೇಳಿದ್ದರಾದರೂ ಇದೀಗ ಏಪ್ರಿಲ್ ತಿಂಗಳಾದರೂ ಇನ್ನೂ ನೆನೆಗುದಿಗೆ ಬಿದ್ದಿದೆ.

ಏನೇನಿದೆ...?

ಪ್ರಕೃತಿಯ ಮಡಿಲಲ್ಲಿ ಎತ್ತರದ ಪ್ರದೇಶದಲ್ಲಿ ಈ ಕೇಂದ್ರ ತಲೆ ಎತ್ತಲಿದೆ. ಉತ್ತರದಲ್ಲಿ ನೀರಿನ ಟ್ಯಾಂಕ್‍ನೊಂದಿಗೆ ಪ್ರಕೃತಿಯ ಸೊಬಗನ್ನು ಸವಿಯಲು ವೀಕ್ಷಣಾ ಗೋಪುರವಿದೆ. ಪ್ರದೇಶಕ್ಕನುಗುಣವಾಗಿ ಹೇಗಿದೆಯೋ ಹಾಗೆ ಇಳಿಜಾರು ಪ್ರದೇಶಗಳಲ್ಲಿ ಈ ಕೇಂದ್ರದ ವಿವಿಧ ಮಜಲುಗಳು ಹರಡಿಕೊಂಡಿವೆ.

ಮೇಲಿನಿಂದ ಕೆಳಗಡೆ ಏರಿಳಿಯಲು ಮೆಟ್ಟಿಲುಗಳು, ಪ್ಯಾಸೇಜ್‍ಗಳಿದ್ದು, ನಡುಭಾಗದಲ್ಲಿ ನೀರಿನ ಕೊಳವೊಂದಿದೆ.

(ಮೊದಲ ಪುಟದಿಂದ) ಇದರಲ್ಲಿ ನೀರು ಸಂಗ್ರಹಗೊಳ್ಳಲಿದ್ದು, ಬೇಸಿಗೆ ಕಾಲದಲ್ಲಿ ತಂಪಾಗಿರುವಂತೆ ಮಾಡಲಿದೆ. ನಂತರ ಒಂದು ಬದಿಯಲ್ಲಿ ವಿವಿದೋದ್ಧೇಶಕ್ಕಾಗಿ ಕೊಠಡಿಗಳು ಇರಲಿವೆ. ಐನ್‍ಮನೆ ಮಾದರಿಯ ಕೋಣೆಯಿದ್ದು, ಕಲ್ಲಿನಿಂದ ನಿರ್ಮಿಸಲಾಗಿರುವ ಕಂಬಗಳು ಆಕರ್ಷಿಸಲಿವೆ. ಕೆಳಭಾಗಕ್ಕೆ ಬಂದಂತೆ ‘ಓಪನ್ ಏರ್ ಥೀಯೇಟರ್’ ಇರಲಿದ್ದು, ಇಲ್ಲಿ ಕಲೆ ಹಾಗೂ ಸಂಸ್ಕøತಿಯ ಪರಿಚಯ ಸಿಗಲಿದೆ.

ಇನ್ನೊಂದು ಭಾಗದಲ್ಲಿ ಒಳಮಂದ್ ಮನೆ ಇರಲಿದ್ದು, ಹಳೆಯ ಐನ್‍ಮನೆಗಳ ಪರಿಚಯವಾಗಲಿದೆ. ಕೊಡವ ಸಂಸ್ಕøತಿಯನ್ನು ಪರಿಚಯಿ ಸುವ, ದಾಖಲೆಗಳು, ವಸ್ತು ಗಳನ್ನೊಳಗೊಂಡ ಗ್ರಂಥಾಲಯವೂ ಇದೆ. ಸಾಂಪ್ರದಾಯಿಕ ತಿಂಡಿ-ತಿನಿಸು, ವಾಣಿಜ್ಯ ಬೆಳೆಗಳ ಪರಿಚಯಕ್ಕಾಗಿ ಮಳಿಗೆಗಳು ಇರುತ್ತವೆ. ಹುಲ್ಲು ಹಾಸುಗಳ ನಡುವೆ ಸುಂದರ ಉದ್ಯಾನ ಕಂಗೊಳಿಸಲಿದೆ. ಇಷ್ಟೆಲ್ಲವೂ ಒಂದೇ ಕಡೆಯಲ್ಲಿ ಸಮ್ಮಿಳಿತವಾಗಲಿವೆ. ಕೇಂದ್ರಕ್ಕೆ ತೆರಳಲು ವಿಶಾಲವಾದ ಕಾಂಕ್ರಿಟ್ ರಸ್ತೆ ಕೂಡ ನಿರ್ಮಿಸಲಾಗಿದೆ.

ಆದರೆ..,

ಸುಂದರವಾಗಿ ಕಂಗೊಳಿಸ ಬೇಕಾಗಿದ್ದ ಹೆರಿಟೇಜ್ ಸೆಂಟರ್ ಈಗ ಕಾಡಿನಿಂದಾವೃತವಾಗಿದೆ. ನಿಧಾನಗತಿಯ ಕೆಲಸ ಹಾಗೂ ಸಾಮಗ್ರಿಗಳ ಸರಬರಾಜಿನಲ್ಲಿ ವಿಳಂಬದ ಹಿನ್ನೆಲೆಯಲ್ಲಿ ಕೆಲಸ ಕೂಡ ಸ್ಥಗಿತಗೊಂಡಿದ್ದು, ಆವರಣದೊಳಗಡೆ ಗಿಡ ಗಂಟಿಗಳು ಬೆಳೆದು ನಿಂತಿವೆ. ಛಾವಣೆಗೆ ಬೇಕಾದ ಮರಮುಟ್ಟುಗಳು ಬಾರದಿರುವದರಿಂದ ಕೆಲಸ ನಿಲ್ಲಿಸಲಾಗಿದೆ. ಕಟ್ಟಡ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ ಯಾದರೂ ಉದ್ಘಾಟನೆಗೂ ಮುನ್ನ ಪಾಳು ಬಿದ್ದ ಕಟ್ಟಡದಂತೆ ಗೋಚರಿಸುತ್ತಿದೆ. ವೆಚ್ಚ ಆರಂಭದಲ್ಲಿ ರೂ. 1.45 ಕೋಟಿಯಿದ್ದುದು ಇದೀಗ ರೂ. 2.68 ಕೋಟಿಗೆ ತಲಪಿದೆ. ಕೆಲಸದ ಉಸ್ತುವಾರಿ ಹೊತ್ತುಕೊಂಡಿ ರುವ ಭಾಸ್ಕರ್ ಅವರ ಪ್ರಕಾರ ಕೆಲಸ ಪೂರ್ಣಗೊಳ್ಳಲು ಇನ್ನೂ ಎರಡು ತಿಂಗಳ ಕಾಲಾವಕಾಶ ಬೇಕೆಂದು ಹೇಳುತ್ತಾರೆ.

ಪುಟ್ಟ ಜಿಲ್ಲೆಯಾದ ಕೊಡಗಿಗೆ ಯಾವದೇ ಯೋಜನೆಗಳು ಬಂದರೂ ಅದು ಪೂರ್ಣಗೊಳ್ಳಬೇಕಾದರೆ ವರ್ಷಾನುಗಟ್ಟಲೆ ಕಾಯಲೇಬೇಕು. ಸುವರ್ಣ ಸಾಂಸ್ಕøತಿಕ ಸಮುಚ್ಚಯ ಭವನ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಮಹಿಳಾ ಕಾಲೇಜು, ಜ. ತಿಮ್ಮಯ್ಯ ಮ್ಯೂಸಿಯಂ, ಬಸ್ ನಿಲ್ದಾಣ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ. ಸಂಬಂಧಿಸಿ ದವರು ಇಂತಹ ಉಪಯುಕ್ತ ಯೋಜನೆಗಳತ್ತ ಗಮನಹರಿಸಿ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂಬದೇ ಆಶಯ...

-ಕುಡೆಕಲ್