ಗುಡ್ಡೆಹೊಸೂರು, ಏ. 12 ಇಲ್ಲಿಗೆ ಸಮೀಪದ ರಂಗಸಮುದ್ರದಲ್ಲಿ ಗಾಳಿ ಮಳೆಗೆ ಸುಮಾರು 100ಕ್ಕೂ ಅಧಿಕ ಸಿಲ್ವರ್ ಮರಗಳು ಧರೆಗುರುಳಿವೆ. ಅಲ್ಲಿನ ನಿವಾಸಿ ಪರ್ಲಕೋಟಿ ಹರಿ ಅವರ ಮನೆಯ ಮೇಲೆ ಮರ ಬಿದ್ದ ಸಂದರ್ಭ ಹರಿ ಮತ್ತು ಅವರ ಪುತ್ರ ಸಮೀಪದಲ್ಲಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮನೆ ಪಕ್ಕದಲ್ಲಿದ್ದ ಕರಿಮೆಣಸು ಬಿಡಿಸುವ ಯಂತ್ರದ ಮೇಲೆ ಮರಬಿದ್ದು, ನಷ್ಟವಾಗಿದೆ. ಅಲ್ಲದೆ ವೆಂಕಟೇಶ್, ಚಂದ್ರಶೇಖರ್, ರುಜುಕುಮಾರ್ ಎಂಬವರ ಮನೆಗಳ ಮೇಲೂ ಮರಬಿದ್ದಿದೆ. ಸ್ಥಳಕ್ಕೆ ಕುಶಾಲನಗರ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ತಾ.ಪಂ. ಸದಸ್ಯ ವಿಜು ಚಂಗಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಂಜರಾಯಪಟ್ಟಣದ ನಂಜುಂಡೇಶ್ವರ ಸನ್ನಿಧಿಯಲ್ಲಿ ಕೋಡಿ ಮಠದ ಸ್ವಾಮೀಜಿ ಈ ಬಾರಿ ಮಳೆಯಿಂದ ಭಾರೀ ಅನಾಹುತ ನಡೆಯಲಿದೆ ಎಂದು ಭವಿಷ್ಯ ನುಡಿದ 3 ಗಂಟೆಯೊಳಗೆ ಈ ರೀತಿ ನಂಜರಾಯಪಟ್ಟಣದ ಸುತ್ತಮುತ್ತ ಮಳೆ ಗಾಳಿಯಿಂದ ಹಾನಿ ಸಂಭವಿಸಿದೆ.

ಕೂಡಿಗೆ: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಲಕ್ಷ್ಮಮ್ಮಮರಿಯಪ್ಪ ಅವರಿಗೆ ಸೇರಿದ ಮನೆಯ ಮೇಲ್ಭಾಗದ ಸೀಮೆಂಟ್ ಸೀಟುಗಳು ಮಳೆಗೆ ಬೀಸಿದ ಗಾಳಿಗೆ ಹಾರಿ ಹೋದ ಘಟನೆ ನಡೆದಿದೆ.

ಮನೆ ಒಳಗಡೆಯ ಬಟ್ಟೆ, ಟಿ.ವಿ, ದವಸ-ಧಾನ್ಯಗಳು ಎಲ್ಲಾ ಹಾಳಾಗಿವೆ. ಶೌಚಾಲಯದ ಗೋಡೆ ಬುಡ ಸಹಿತ ಉರುಳಿದ್ದು, ಭಾರಿ ನಷ್ಟ ಉಂಟಾಗಿದೆ.

ಚಿಕ್ಕತ್ತೂರಿನಲ್ಲಿಯೂ: ಸಮೀಪದ ಚಿಕ್ಕತ್ತೂರು ಗ್ರಾಮದ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸ್ವಾಮಿ ಎಂಬವರಿಗೆ ಸೇರಿದ ಮನೆಯ ಸೀಮೆಂಟ್ ಶೀಟುಗಳು ಮಳೆ, ಗಾಳಿಯ ಆರ್ಭಟಕ್ಕೆ ಹಾರಿ ಪುಡಿಯಾಗಿವೆ. ಸ್ಥಳಕ್ಕೆ ಕೂಡಿಗೆ ಜಿ.ಪಂ. ಸದಸ್ಯೆ ಮಂಜುಳಾ, ತಾ.ಪಂ. ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಕೂಡಿಗೆ ವ್ಯಾಪ್ತಿಯ ಗ್ರಾಮ ಲೆಕ್ಕಿಗ ಗೌತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಲುಸೆಯಲ್ಲೂ: ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲುಸೆ ಗ್ರಾಮದ ಶೇಖರ ಎಂಬವರ ಮನೆಯ ಶೀಟ್‍ಗಳು ಕೂಡ ನೆಲಕ್ಕುರುಳಿದೆ.

ಮರಗೋಡು : ಮರಗೋಡು ವ್ಯಾಪ್ತಿಯಲ್ಲಿ ತಾ. 11ರಂದು ಸುರಿದ ಭಾರೀ ಮಳೆಯಿಂದಾಗಿ ಅಲ್ಲಿನ ಗ್ರಂಥಾಲಯದ ಮೇಲೆ ಮರವೊಂದು ಉರುಳಿ ಬಿದ್ದಿದ್ದು, ಕಟ್ಟಡ ಜಖಂಗೊಂಡಿದೆ. ಕಟ್ಟಡದ ಮೇಲೆ ಮರ ಬಿದ್ದಿದ್ದು, ಮೇಲ್ಛಾವಣಿಗೆ ಹಾನಿಯುಂಟಾಗಿದೆ.