ಮಡಿಕೇರಿ, ಏ. 13: ಕುಶಾಲನಗರ ಪಟ್ಟಣದ ಮನೆಯೊಂದಕ್ಕೆ ನುಗ್ಗಿರುವ ಕಳ್ಳರು ರೂ.2.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದ್ದು, ಈ ಬಗ್ಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಶಾಲನಗರದ ಬಸಪ್ಪ ಬಡಾವಣೆಯ ನಿವಾಸಿ ಬಿ.ಟಿ. ಕುಶಾಲಪ್ಪ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ತಾ. 10ರಂದು ಕುಶಾಲನಗರದಿಂದ ಕುಶಾಲಪ್ಪ ಕುಟುಂಬದವರು ಸುಂಟಿಕೊಪ್ಪದಲ್ಲಿರುವ ತಮ್ಮ ತೋಟದ ಮನೆಗೆ ತೆರಳಿದ್ದರು. ಅಲ್ಲಿ ಎರಡು ದಿನವಿದ್ದ ಅವರು ನಿನ್ನೆ ಸಂಜೆ ಮನೆಗೆ ಹಿಂತಿರುಗಿದಾಗ ಮನೆ ಎದುರು ಕತ್ತಿ ಹಾಗೂ ದೊಣ್ಣೆ ಬಿದ್ದಿದ್ದನ್ನು ಗಮನಿಸಿ ಗಾಬರಿಯಾಗಿದ್ದಾರೆ. ಮನೆಯ ಹಿಂಭಾಗಕ್ಕೆ ತೆರಳಿದ ಸಂದರ್ಭ ಹಿಂಬಾಗಿಲು ಹಾಗೂ ಕಿಟಕಿ ತೆರೆದುಕೊಂಡಿತ್ತು. ಮನೆಯೊಳಗೆ ಪರಿಶೀಲಿಸಿದ ಸಂದರ್ಭ ಕೊಠಡಿಯಲ್ಲಿದ್ದ ಬೀರುವನ್ನು ಒಡೆದಿರುವ ಕಳ್ಳರು (ಮೊದಲ ಪುಟದಿಂದ) ರೂ. 10 ಸಾವಿರ ನಗದು ಸೇರಿದಂತೆ 2.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವದು ಬೆಳಕಿಗೆ ಬಂದಿದೆ. ಈ ಬಗ್ಗೆ ಕುಶಾಲಪ್ಪ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.