ಸೋಮವಾರಪೇಟೆ, ಏ. 12: ಇಲ್ಲಿನ ರೋಟರಿ ಸಂಸ್ಥೆಯ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಪಟ್ಟಣ ಪಂಚಾಯಿತಿ, ವಕೀಲರ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಸಮಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಮಹಿಳಾ ಸಮಾಜದಲ್ಲಿ 'ಶಿಶು ಮತ್ತು ಮಾತೃ ಸಂಬಂಧ' ಕಾರ್ಯಾಗಾರ ನಡೆಯಿತು.
ರೋಟರಿ ಮಾಜಿ ರಾಜ್ಯಪಾಲ ಡಾ.ರವಿ ಅಪ್ಪಾಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಟರಿ ಸಂಸ್ಥೆ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಎಲ್ಲಾ ವರ್ಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಇಲ್ಲಿನ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಪರಶುರಾಮ್ ದೊಡ್ಡಮನಿ ಮಾತನಾಡಿ, ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ನೊಂದವರ ಅನುಕೂಲಕ್ಕಾಗಿ ಕಾನೂನು ಸೇವಾ ಪ್ರಾಧಿಕಾರವನ್ನು ಜಾರಿಗೆ ತರುವ ಮೂಲಕ ಆರ್ಥಿಕವಾಗಿ ಹಿಂದುಳಿದವರು ಹಾಗೂ ದೀನ ದಲಿತರಿಗೆ ಉಚಿತ ಕಾನೂನು ಸೇವೆಯನ್ನು ನೀಡುತ್ತಿದೆ ಎಂದರು.
ಆಲೂರು ಕೇಂದ್ರದ ವೈದ್ಯಾಧಿಕಾರಿ ಸುಪರ್ಣ ಮಾಹಿತಿ ನೀಡಿ, ಸುರಕ್ಷಿತ ತಾಯ್ತನಕ್ಕೆ ಅರೋಗ್ಯ ಇಲಾಖೆ ಕಟ್ಟಿಬದ್ದವಾಗಿದ್ದು, ಫಲಾನುಭವಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಕೊಳ್ಳಬೇಕೆಂದು ತಿಳಿಸಿದರು. ವೇದಿಕೆ ಯಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶ ಶ್ಯಾಂಪ್ರಕಾಶ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ರೋಟರಿ ಅಧ್ಯಕ್ಷ ಭರತ್ ಭೀಮಯ್ಯ, ಸಹಾಯಕ ರಾಜ್ಯಪಾಲ ಸಿ.ಆರ್.ಪ್ರಶಾಂತ್, ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ರೋಟರಿ ಜಿಲ್ಲಾ ಮುಖ್ಯಸ್ಥ ಎಸ್.ಡಿ. ವಿಜೇತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್, ಮಕ್ಕಳ ತಜ್ಞ ಜಸ್ವಂತ್, ರೊಟರಿ ಕಾರ್ಯದರ್ಶಿ ವನಮಾಲಿ ಹೆಬ್ಬಾರ್ ಇದ್ದರು. ಶೋಭ ಯಶ್ವಂತ್ ಕಾರ್ಯಕ್ರಮ ನಿರ್ವಹಿಸಿದರು.