ಮಡಿಕೇರಿ, ಏ.13: ದೇವರ ದಾಸಿಮಯ್ಯನವರು ಅಪ್ಪಟ ಶಿವಭಕ್ತರು. ಅವರ ತತ್ವ ನಿಷ್ಠೆ ಅನುಕರಣೀಯವಾದದ್ದು, ಅವರು ಇಡೀ ಕರ್ನಾಟಕದ ಆಸ್ತಿ, ಮಹಾನ್ ಚಿಂತಕರು ಎಂದು ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಶ್ರೀ ದೇವರ ದಾಸಿಮಯ್ಯ ಜಯಂತ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹತ್ತನೆಯ ಶತಮಾನದಲ್ಲಿ ವಚನಕಾರರಲ್ಲಿ ದೇವರ ದಾಸಿಮಯ್ಯ ಅವರು ಪ್ರಮುಖರಾಗಿ ವಚನಗಳ ಮೂಲಕ ಆಡುಭಾಷೆಯಲ್ಲಿ ಜನರಿಗೆ ಅರ್ಥೈಸುವಲ್ಲಿ ಹಾಗೂ ಸಮಾಜದಲ್ಲಿ ಸಮಾನತೆಯನ್ನು ತರಬೇಕು ಎಂಬ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸಿದರು. ವಚನ ಸಿದ್ಧಾಂತ ಮುಖಾಂತರ ಸಾಮಾಜಿಕ ಸುಧಾರಣೆ ಮಾಡುವಲ್ಲಿ ಶ್ರಮಿಸಿದವರು. ಇವರ ವಚನಗಳ ಸಿದ್ಧಾಂತಗಳು ಪ್ರತಿ ಯೊಬ್ಬರೂ ತಿಳಿಯಬೇಕು ಎಂದರು.
ನಗರಸಭೆ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಮಾತನಾಡಿ ದೇವರ ದಾಸಿಮಯ್ಯ ಅವರು ವಚನಾಕಾರ ರಾಗಿ, ಸಮಾನತೆಯ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಸ್ಮರಿಸಿದರು.
ಸಾಹಿತಿ ಕಣಿವೆ ಭಾರಧ್ವಾಜ್ ಆನಂದತೀರ್ಥ ಮಾತನಾಡಿ ದೇವರ ದಾಸಿಮಯ್ಯ ಅವರು 176 ವಚನಗಳನ್ನು ಬರೆದಿದ್ದಾರೆ. ಅವರು ಆದ್ಯ ವಚನಕಾರರು ಎಂದು ತಿಳಿಸುತ್ತಾ ಗಂಡು, ಹೆಣ್ಣು ಇಬ್ಬರು ಸಮಾನರು ಎಂದು ಪ್ರತಿಪಾದಿಸಿದವರು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವರ ದಾಸಿಮಯ್ಯ ಅವರ ಜೀವನ ಅನುಕರಣೀಯ ಎಂದರು.
ಕ.ಸಾ.ಪ. ಜಿಲ್ಲಾ ಘಟಕ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ರಾಜ್ಯದಲ್ಲಿ ಹಲವಾರು ಮಹನಿಯರ ದಿನಾಚರಣೆಯನ್ನು ನಡೆಸುತ್ತಿದ್ದು, ಈ ದಿನಾಚರಣೆಗಳು ಆಯಾ ಸಮಾಜ ಬಾಂದವರಿಗೆ ಸೀಮಿತ ಎನ್ನುವ ಸಂಕುಚಿತ ಮನೋಭಾವದಿಂದ ಹೊರಬಂದು ಎಲ್ಲರೂ ಆಚರಣೆಯಲ್ಲಿ ಭಾಗವಹಿಸುವಂತಾಗಬೇಕು ಎಂದು ಕರೆ ನೀಡಿದರು.
ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ನಿರ್ದೇಶಕರಾದ ಡಿ.ಕೆ.ತಿಮ್ಮಪ್ಪ ಅವರು ಮಾತನಾಡಿ ನೇಕಾರ ಸಮುದಾಯದವರು ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದರು.
ನೇಕಾರರ ಸಂಘದ ಜಿಲ್ಲಾಧ್ಯಕ್ಷ ಟಿ.ಕೆ.ಪಾಂಡುರಂಗ ಅವರು ಮಾತನಾಡಿ ನೇಕಾರರ ಸಮಾಜ ಇತರರಿಗೆ ಮಾದರಿಯಾಗಿ ಬದುಕಬೇಕು. ನೇಕಾರರು ಸರ್ಕಾರದ ಸೌಲಭ್ಯಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಕರೆ ನೀಡಿದರು.
ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಅಧ್ಯಕ್ಷ ಬಿ.ಎನ್. ಪ್ರಕಾಶ್, ಭಾರತೀ ರಮೇಶ್, ಡಿ.ಕೆ. ತಿಮ್ಮಪ್ಪ, ಟಿ.ಕೆ.ಪಾಂಡುರಂಗ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಭಾರತೀ ರಮೇಶ್ ಮತ್ತು ತಂಡದವರು ನಾಡಗೀತೆ ಹಾಡಿದರು. ಶಂಕರಯ್ಯ ನಿರೂಪಿಸಿದರು. ವೆಂಕಟೇಶ್ ಮತ್ತು ತಂಡದವರು ರೈತಗೀತೆ ಹಾಡಿದರು. ಬಿ.ಸಿ.ಎಂ. ಅಧಿಕಾರಿ ಕೆ.ವಿ. ಸುರೇಶ್ ಸ್ವಾಗತಿಸಿದರು. ನಾಗರಾಜ್ ಶೆಟ್ಟಿ ವಂದಿಸಿದರು.