ಕೂಡಿಗೆ, ಏ. 13: ಕೇಂದ್ರ ಸರ್ಕಾರದ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಯೋಜನೆಯಡಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಹಾಗೂ ಸೋಮವಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸಹಯೋಗದಲ್ಲಿ ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ಖಗೋಳಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಖಗೋಳ ವಿಜ್ಞಾನದ ವಿಸ್ಮಯಗಳು ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಜಿ. ಶ್ರೀನಾಥ್ ಉಪನ್ಯಾಸ ನೀಡಿದರು. ನಂತರ ಖಗೋಳಯಾನದ ಕುರಿತು ಮಕ್ಕಳೊಂದಿಗೆ ಚಟುವಟಿಕೆಯಾಧಾರಿತ ಸಂವಾದ ನಡೆಸಿದರು. ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕೇಳಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀನಾಥ್, ಸೌರವ್ಯೂಹ ವ್ಯವಸ್ಥೆ, ಆಕಾಶ ಕಾಯಗಳು ಮತ್ತು ನಕ್ಷತ್ರಗಳ ಬಗ್ಗೆ ವಿವರಿಸಿದರು. ನಕ್ಷತ್ರಗಳ ಹುಟ್ಟು ಮತ್ತು ಸಾವು, ಕ್ಷುದ್ರಗ್ರಹಗಳು, ನಕ್ಷತ್ರ ಪುಂಜ, ಜ್ಯೋತಿಷ್ಟವರ್ಷ, ಉಲ್ಕೆಗಳು, ಧೂಮಕೇತುಗಳು ಹಾಗೂ ಗ್ರಹಣಗಳ ಕುರಿತು ತಿಳಿಸಿದ ಅವರು ಭಾರತದ ಇಸ್ರೋ ಸಂಸ್ಥೆಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಕೈಗೊಂಡಿರುವ ಸಾಧನೆಗಳ ಕುರಿತು ವಿವರಿಸಿದರು.
ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮ ಸಂಯೋಜಕ ಎಂ.ಹೆಚ್. ಹರೀಶ್, ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಯೋಜನೆಯಡಿ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು. ಎಸ್‍ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಮುಖ್ಯ ಶಿಕ್ಷಕಿ ಬಿ.ಆರ್. ತಾರಾ, ಶಿಕ್ಷಕರಾದ ಎಚ್.ಎಂ. ಪ್ರಕಾಶ್, ಎಚ್.ಬಿ. ಗೌರಮ್ಮ, ನಿಂಗೇಗೌಡ, ಸೌಮ್ಯ ಶಾರದೆ, ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು.