ನಾಪೆÇೀಕ್ಲು, ಏ. 12: ಇತಿಹಾಸ ಪ್ರಸಿದ್ಧ ಆದಿ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ಎರಡು ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕ ಹಬ್ಬ ತಾ. 12 ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು. ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ತಂಗಿ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ಉತ್ಸವಕ್ಕೆ ಪಾಡಿ ದೇವಳದ ಬಳಿಯ ಅಮ್ಮಂಗೇರಿ ಕಣಿಯ ಕಟುಂಬಸ್ಥರ ಮನೆಯಿಂದ ಸಾಂಪ್ರಾದಾಯಿಕವಾಗಿ ಕೊಡೆ ತರುವ ಮೂಲಕ ಚಾಲನೆ ದೊರೆಯಿತು.ಮಧ್ಯಾಹ್ನ 12 ಗಂಟೆಗೆ ಶ್ರೀ ಇಗ್ಗುತ್ತಪ್ಪ ದೇವರಿಗೆ ಮಹಾಪೂಜೆ ಸಲ್ಲಿಸಿದ ನಂತರ ಕಣಿಯರ ಐನ್ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಎರಡು ಕೊಡೆಗಳನ್ನು ಇಗ್ಗುತ್ತಪ್ಪ ದೇವಳದ ಬಳಿಯ ಕೊಲ್ಲಿಯಲ್ಲಿ ತೀರ್ಥ ಸ್ನಾನ ಬಳಿಕ ಬಣ್ಣ ಹಚ್ಚಿ ಮನೆಯ ಬಳಿಯಿರುವ ಸುಮಾರು ಒಂದು ಸಾವಿರ ವರ್ಷ ಹಳೆಯ ಮಾವಿನ ಮರದ ಬುಡದಲ್ಲಿ ಪೂಜಿಸಿ, ಎರಡು ಕೊಡೆ ಮತ್ತು ಅದಕ್ಕೆ ಅಳವಡಿಸುವ ಬಿದಿರುಗಳನ್ನು ಕಣಿಯರ ಕುಟುಂಬಸ್ಥರು ಮತ್ತು ಅಂಜರಿಕೆ ಕುಡಿ, (ದಲಿತರು) ಸೇರಿ ಪನ್ನಂಗಾಲ ದೇವಸ್ಥಾನದತ್ತ ತೆರಳಿದರು. ದಾರಿ ಮಧ್ಯೆ ಕಾಳಿಮಾನಿಯ ಮೇಚಂಬರೆ ಎಂಬಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಿಂದ ತರಲಾದ ಹೂವಿನ ಹಾರ, ಗಂಧ ಪುಷ್ಪ್ಪಗಳಿಂದ ಪೂಜಿಸಿ ದೇವಿಯ ಪವಿತ್ರ ಕೊಡೆಯು ಕಕ್ಕಬ್ಬೆ ಸಮೀಪದ ಮೇಚಂಡ ಕೆಳಮುಟ್ಟ ತಲುಪಿತು. ಅಲ್ಲಿ ಅಂಜರಿಕೆ ಕುಡಿಯ, ಕರಿಚಾಮುಂಡಿ, ಪುಲಿಚಾಮುಂಡಿ. ಅಯ್ಯಪ್ಪ ದೇವರ ದರ್ಶನ ಪಾತ್ರಿಗಳು, ಕಲಿಯಂಡ ಕುಟುಂಬದ ಎತ್ತೇರಾಟ ಹಾಗೂ ಭಕ್ತ ಸಮೂಹದೊಂದಿಗೆ ಕೊಡೆಯನ್ನು ಶ್ರದ್ಧಾಭಕ್ತಿಯಿಂದ ಭರಮಾಡಿಕೊಳ್ಳಲಾಯಿತು. ಅಲ್ಲಿಂದ ಪ್ರಯಾಣ ಬೆಳೆಸಿದ ಈ ದೈವಿಕ ಕೊಡೆಯು ಯವಕಪಾಡಿ ಗ್ರಾಮದ ಪನ್ನಂಗಾಲದ ಭತ್ತದ ಗದ್ದೆಯಲ್ಲಿ ಗಿರ ಗಿರನೆ ತಿರುಗುವದರ ಮೂಲಕ ಭಕ್ತರಿಗೆ ದರ್ಶನ ನೀಡಿತು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಆದಿ ಶ್ರೀ ಪನ್ನಂಗಾಲತ್ತಮ್ಮೆ ದೇವಾಲಯದ ವಿವಿಧ ದೈವ ಪಾತ್ರಿಗಳು ತಕ್ಕ ಮುಖ್ಯಸ್ಥರು ಕೊಡೆಯನ್ನು ಶ್ರದ್ಧಾಭಕ್ತಿಯಿಂದ ಬರಮಾಡಿಕೊಂಡು ದೇವಾಲಯಕ್ಕೆ ಕರೆದೊಯ್ದರು. ದೇವಳದಲ್ಲಿ ವಿವಿಧ ದೈವಿಕ ಕಾರ್ಯಗಳು, ಹರಕೆ ಒಪ್ಪಿಸುವದು ಮೊದಲಾದ ಸಂಪ್ರದಾಯದೊಂದಿಗೆ ಉತ್ಸವ ಸಂಪನ್ನಗೊಂಡಿತು. ಇಂದು ಅಂದರೆ ತಾ. 13 ರಂದು (ಇಂದು) ಕುರುಂದ ಮತ್ತಿತರ ದೇವರ ಪೂಜೆಗಳು ನಡೆಯಲಿವೆ.

ಕೊಡೆ ತಯಾರಿ: ಮಾರ್ಚ್ 29 ರಂದು ದೇವಿಯ ಹಬ್ಬಕ್ಕೆ ಕಟ್ಟು ಹಾಕಲಾಗುತ್ತದೆ. ಏ. 1ರಂದು ಅಂಜರಿಕೆ ಕುಡಿ, ಯವರು ಕೊಡೆಗೆ ಬೇಕಾದ ಬಿದಿರನ್ನು ಕಡಿದು ತರುತ್ತಾರೆ. ತಾ. 3 ರಂದು ಕೊಡೆಗೆ ಬೇಕಾದ ಓಲಿ (ಕಡಪನೆ ಮರದ ಎಲೆ) ಯನ್ನು ಕಣಿಯ ಕುಟುಂಬಸ್ಥರು ಕೇರಳದಿಂದ ತರುವರು. ನಂತರ ಮೂರು ಬಿಸಿಲು ಮತ್ತು ಮೂರು ಇಬ್ಬನಿಯಿಂದ ಬಿದಿರು ಮತ್ತು ಓಲಿಯನ್ನು ಒಣಗಿಸಿ ಹದ ಮಾಡಿ ಕೊಡೆ ತಯಾರಿಸಲಾಗುತ್ತದೆ. ಈ ಕೊಡೆಯು ಒಂದೂಮುಕ್ಕಾಲು ಅಡಿ ಅಗಲವಿರುತ್ತದೆ. ದೊಡ್ಡ ಕೊಡೆಗೆ ಅಳವಡಿಸುವ ಬಿದಿರು 17 ಗಂಟು ಉದ್ದ ಮತ್ತು ಸಣ್ಣ ಕೊಡೆಗೆ ಅಳವಡಿಸುವ ಬಿದಿರು 9 ಗಂಟು ಉದ್ದವಿರುತ್ತದೆ. ಈ ಕೊಡೆಗಳನ್ನು ಕಣಿಯರ ಕುಟುಂಬದ ಸಂತೋಷ್, ನಾಣಯ್ಯ, ದೊರೆ ಕುಟುಂಬದ ಸದಸ್ಯರ ಸಹಕಾರದೊಂದಿಗೆ ನಿರ್ಮಿಸುತ್ತಾರೆ, ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಜ್ಯೋತಿಷಿಗಳಾದ ಇವರು ಪನ್ನಂಗಾಲತ್ತಮ್ಮೆ ದೇವಿಯ ಉತ್ಸವದಲ್ಲೂ ಮುಖ್ಯ ಪಾತ್ರದಾರಿಗಳಾಗಿದ್ದಾರೆ.

ಕಾವಾಡಿ ಭಗವತಿ ಉತ್ಸವ

ಅಮ್ಮತ್ತಿ ಸನಿಹದ ಕಾವಾಡಿ ಭಗವತಿ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುತ್ತಿದೆ. ತಾ. 5 ರಂದು ದೇವರ ಕಟ್ಟು ಬೀಳುವ ಮೂಲಕ ಉತ್ಸವ ಆರಂಭಗೊಂಡಿದೆ. ನಿನ್ನೆ ದೇವರು ಬನಕ್ಕೆ ತೆರಳುವದು. ತಾ. 12 ರಂದು ದೊಡ್ಡಹಬ್ಬ ನಡೆಯಿತು. ಈ ದಿನ ದೇವರ ಅವಭೃತಸ್ನಾನ, ದರ್ಶನ ಇದರೊಂದಿಗೆ ಕುದುರೆ, ಬೊಳಕಾಟ್, ಉಮ್ಮತ್ತಾಟ್‍ನಂತಹ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಅನ್ನದಾನವನ್ನು ಏರ್ಪಡಿಸಲಾಗಿತ್ತು. ತಾ. 13 ರಂದು (ಇಂದು) ಚೂಳೆ, ತಾ. 14 ರಂದು ಭದ್ರಕಾಳಿ ದೇವರ ಬೇಡುಹಬ್ಬ ನಡೆಯಲಿದೆ.

ಬಿರುನಾಣಿ ಪುತ್ತು ಭಗವತಿ ದೇವರ ಉತ್ಸವ

ಶ್ರೀಮಂಗಲ: ದಕ್ಷಿಣ ಕೊಡಗಿನ ಬಿರುನಾಣಿ ಗ್ರಾಮದಲ್ಲಿನ ಶ್ರೀ ಪುತ್ತು ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ತಾ.09 ರಂದು ಕೊಡಿಮರ ನಿಲ್ಲಿಸುವ ಮೂಲಕ ಚಾಲನೆ ದೊರೆತಿದ್ದು, ತಾ.17 ರಂದು ವಾರ್ಷಿಕ ಉತ್ಸವ ನಡೆಯಲಿದೆ. ತಾ. 16 ರಂದು ಈ ಉತ್ಸವದಲ್ಲಿ ವಿಶಿಷ್ಟವಾದ ಪೊಮ್ಮಂಗಲ (ಎಡಮೆ ಮಂಗಲ) ಆಚರಣೆ ನಡೆಯಲಿದೆ.

ಪಾಕೇರಿನಾಡು ಬಿರುನಾಣಿಯ ಶ್ರೀ ಪುತ್ತ್ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದಲ್ಲಿ ಕೊಡವ ಮದುವೆ ಪದ್ದತಿಯಲ್ಲಿ ವಧು-ವರರು ಧರಿಸುವ ಉಡುಗೆಯನ್ನು ಪರಸ್ಪರ ಅದಲು ಬದಲಾಗಿ ಧರಿಸಿ ಹರಕೆ ತೀರಿಸುವದು ವಿಶೇಷವಾಗಿದೆ. ಅಂದರೆ ಗಂಡು ಮಕ್ಕಳಿಗೆ ಸ್ತ್ರೀಯರಂತೆ ಸೀರೆ-ರವಿಕೆ ಉಡುಗೆ ಹಾಗೂ ಹೆಣ್ಣು ಮಕ್ಕಳಿಗೆ ಪುರುಷರಂತೆ ಬಿಳಿ (ಕುಪ್ಯಚೇಲೆ) ಕುಪ್ಪಸದ ಉಡುಪನ್ನು ಧರಿಸಿ ಅವರವರ ಮನೆಯಲ್ಲಿ ಕೊಡವ ಮದುವೆ ಸಂದರ್ಭ ಮಾಡುವ ಎಲ್ಲಾ ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಮಾಡಲಾಗುತ್ತದೆ.

ಸಾಂಪ್ರದಾಯಿಕ ಮೂರು ಕಾಲಿನ ಮುಕ್ಕಲಿ (ಮೂರು ಕಾಲಿನ ಸಣ್ಣ ಸ್ಟೂಲು)ನಲ್ಲಿ ಕೂರಿಸಿ ಮದುವೆಯಲ್ಲಿ ಜನರು ಆಶೀರ್ವಾದಿಸುವಂತೆ ‘ಪೊಮ್ಮಂಗಲ’ದಲ್ಲಿ ನಡೆಯುತ್ತದೆ. ಪೊಮ್ಮಂಗಲವನ್ನು ಎಡಮೆ ಮಂಗಲ ಎಂದೂ ಸಹ ಕರೆಯುತ್ತಾರೆ. ಕೊಡವ ಭಾಷೆಯಲ್ಲಿ ಎಡಮೆ ಎಂದರೆ ಅದಲು ಬದಲು ಎಂದರ್ಥ. ಹರಕೆ ತೀರಿಸಲು ಮದು ಮಗಳ ಹಾಗೂ ಮದುಮಗನ ಉಡುಪು ಧರಿಸಿದವರು ಹಿರಿಯರ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಮನೆಯಲ್ಲಿನ ಸಂಪ್ರದಾಯ ನಂತರ ದೇವಸ್ಥಾನಕ್ಕೆ ಬಂದು 3 ಸುತ್ತು ಪ್ರದಕ್ಷಿಣೆ ಹಾಕಿ ಹರಕೆ ತೀರಿಸುತ್ತಾರೆ. ಮದುವೆಯಾಗಲು ತಡವಾದವರು, ಮಕ್ಕಳಿಲ್ಲದವರು, ಖಾಯಿಲೆಗಳಿಗೆ ತುತ್ತಾದವರು, ಹಲವು ಕಷ್ಟಗಳಿಂದ ಕೊರಗಿದವರು ಪೊಮ್ಮಂಗಲ ಹರಕೆ ಕೊಡುವದು ಇಲ್ಲಿನ ವಿಶೇಷತೆ.

ಮಕ್ಕಳಾಗದವರು ಮಕ್ಕಳಾಗುವಂತೆ ಹರಕೆ ಮಾಡಿಕೊಂಡು ಹುಟ್ಟುವ ಮಗುವನ್ನು ಇಲ್ಲಿ ಪೊಮ್ಮಂಗಲ ಮಾಡಿಸುತ್ತಾರೆ. ಮಕ್ಕಳಿಗೆ ತಾಯಿ-ತಂದೆ ಮೊಮ್ಮಂಗಲದ ಹರಕೆ ಮಾಡಿಕೊಂಡು ತೀರಿಸದಿದ್ದರೆ ಅಂತ ಮಕ್ಕಳಿಗೆ ಕಂಕಣಭಾಗ್ಯ ಒದಗಿ ಬರುವದಿಲ್ಲವೆಂಬ ನಂಬಿಕೆಯೂ ಇದೆ. ಆದ್ದರಿಂದ ಮಕ್ಕಳು ಪ್ರೌಢಾವಸ್ಥೆಗೆ ಬರುವ ಮೊದಲು ವಿಶೇಷವಾಗಿ ಹೆಣ್ಣು ಮಕ್ಕಳನ್ನು ಪ್ರೌಢಾವಸ್ಥೆಗೆ ಮೊದಲೇ ಈ ಹರಕೆ ತೀರಿಸಬೇಕು. ಮದುವೆಗೆ ಮುಂಚಿತವಾಗಿ ಗಂಡು ಮಕ್ಕಳು ಹರಕೆ ತೀರಿಸಬೇಕು. ಈ ಸಂದರ್ಭ ಕೊಡವ ಜಾನಪದ ಬಾಳೋ ಪಾಟ್‍ನೊಂದಿಗೆ ಕಳಶ ಹೊತ್ತು ಭಗವತಿ ದೇವಿಗೆ ಹರಕೆ ಒಪ್ಪಿಸುವ ಪದ್ದತಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಪ್ರಮಾಣ ಕಲು ್ಲ: ಪುತ್ತುಭಗವತಿ ದೇವಿಯ ಗುಡಿಯ ಪಕ್ಕದಲ್ಲಿ ಆನೆಯ ರೂಪದಲ್ಲಿ ಕರಿ ಬಣ್ಣದ ಪ್ರಮಾಣ ಕಲ್ಲು ಇವತ್ತಿಗೂ ಇದೆ. ಅನ್ಯಾಯವಾದಾಗ ನ್ಯಾಯ ದೊರಕಲು ಈ ಕಲ್ಲನ್ನು ಮುಟ್ಟಿ ಪ್ರಮಾಣ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರಂತೆ. ಈ ಕಲ್ಲನ್ನು ತೆಗೆಯಲು ಒಮ್ಮೆ ಪ್ರಯತ್ನಿಸಿದಾಗ ಇದರಲ್ಲಿ ರಕ್ತ ಬಂತೆಂಬ ಮಾಹಿತಿ ಇದೆ. ಆದ್ದರಿಂದ ಈ ಕಲ್ಲನ್ನು ಹಾಗೆಯೇ ಇಟ್ಟಿದ್ದಾರೆ. ಈ ದೇವಿಯ ಮಹಾಮಹಿಮೆಯಲ್ಲಿ ಇದು ಒಂದು.

ಮತ್ತ್, ಪುತ್ತ್, ವಗರೆ, ರುದ್ರಗುಪ್ಪೆ : ಮತ್ತೂರಿನ ಭೂತನಾಥ ಅಯ್ಯಪ್ಪ, ಬಿರುನಾಣಿಯ ಪುತ್ತು ಭಗವತಿ, ವಗರ ಅಯ್ಯಪ್ಪ ಹಾಗೂ ರುದ್ರಗುಪ್ಪೆಯ ಜೋಡು ಭಗವತಿ (ದುರ್ಗಿ ಹಾಗೂ ದುರ್ಗಾ ಪರಮೇಶ್ವರಿ-ಶೂಲಿನಿ, ಮಾಲಿನಿ) ಇವರು ಸಹೋದರ ಸಹೋದರಿ ದೇವರಾಗಿದ್ದಾರೆ. ಇವೆಲ್ಲ ದೇವರ ಉತ್ಸವ ಒಂದೇ ದಿನದಂದು ನೆರವೇರುವದು ವಿಶೇಷ. ಹಾಗೆಯೇ ಬಿರುನಾಣಿಯ ಪುತ್ತುಭಗವತಿ ದೇವಸ್ಥಾನ ಪಶ್ಚಿಮಕ್ಕೆ ಅಭಿಮುಖವಾಗಿ ನೆಲೆ ನಿಂತಿರುವದು ಮತ್ತೊಂದು ವಿಶೇಷ.

ಹನುಮ ಜಯಂತಿ

ಸುಂಟಿಕೊಪ್ಪ: ಸಮೀಪದ ಕೊಡಗರಹಳ್ಳಿ ಗ್ರಾಮದ ಮಾರುತಿ ನಗರದ ಶ್ರೀ ಆಂಜನೇಯ ಸ್ವಾಮಿ ಮಠದ ವಾರ್ಷಿಕೋತ್ಸವ ಮತ್ತು ಹನುಮಾನ್ ಜಯಂತಿಯು ಶ್ರದ್ಧಾಭಕ್ತಿಯಿಂದ ನಡೆಯಿತು.

ಮಂಗಳವಾರ ಬೆಳಿಗ್ಗೆಯಿಂದ ಗಣಪತಿ ಹೋಮ, ನವಕಲಶ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ,ತೀರ್ಥಪ್ರಸಾದ ವಿತರಣೆ ನಡೆದು ಮಧ್ಯಾಹ್ನ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರೆವೇರಿಸಲಾಯಿತು.

ಮುಕ್ಕೋಟು ಮಹಾಲಕ್ಷ್ಮಿ ಉತ್ಸವ

ನಾಪೋಕ್ಲು: ಮಾರ್ಚ್ 29 ರಿಂದ ಪ್ರಾರಂಭಗೊಂಡು ತಾ. 15ರ ವರೆಗೆ ಎರಡು ವರ್ಷಕೊಮ್ಮೆ ನಡೆಯುವ ಮುಕ್ಕೋಟು ಮಹಾಲಕ್ಷ್ಮಿ ಉತ್ಸವದಲ್ಲಿ ಪೀಲಿಆಟ್, ತೇಲಾಟ್, ಬಿಲ್ಲಾಟ್, ಕತ್ತಿಯಾಟ್, ಕೊಂಬಾಟ್, ಜೋಡಿಯಾಟ್, ಅಜ್ಜಿಯಾಟ್, ಹೀಗೆ ಹದಿನೆಂಟು ತರಹದ ದೇವರ ಕುಣಿತ ನಡೆಯಲಿದೆ. ಕೈಕಾಡು ಗ್ರಾಮದ, ಮಕ್ಕೋಟು ಕೇರಿಯ ದೇವತಕ್ಕ ಚೊಟ್ಟೆಯಂಡ, ಭಂಡಾರ ತಕ್ಕ ನೆರೆಯಂಡಮ್ಮಂಡ, ನಾಯಕಂಡ ಕದ್ದಣಿಯಂಡ, ಪಾಡಿಯಂಡ, ಬಟ್ಟಿಯಂಡ, ಕುಟುಂಬ ಹಾಗೂ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ತಾ. 13 ರಂದು ಇರುಕೂಳು ಊಟ, ತಾ. 14 ರಂದು ಪಟ್ಟಣಿ ಹಾಗೂ ಮಧ್ಯಾಹ್ನ 2 ಗಂಟೆಗೆ ಅಯ್ಯಪ್ಪ ತೆರೆ ತಾ. 15 ರಂದು ಬೆಳಿಗ್ಗೆ 9 ಗಂಟೆಗೆ ಭಂಡಾರ ತಕ್ಕ ನೆರೆಯಂಡಮ್ಮಂಡ ಕುಟುಂಬದಿಂದ ಆರು ಕುಟುಂಬದವರು ಎತ್ತುಪೋರಾಟದೊಂದಿಗೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರವೇಶ. ನಂತರ ದೇವರ ಕುಣಿತಗಳನ್ನು ಒಂದೊಂದಾಗಿ ಕುಣಿಯುತ್ತಾ ಸಂಪನ್ನವಾಗಲಿದೆ.

ಆಲೂರುಸಿದ್ದಾಪುರ: ತಾ. 13 ರಂದು (ಇಂದು) ಚೈತ್ರ ಬಹುಳ ತದಿಗೆ ಕಾರ್ಯಕ್ರಮ ನಡೆಯುತ್ತದೆ. ಬೆಳಗ್ಗೆ 5 ಗಂಟೆಗೆ ಶ್ರೀಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿ ಪ್ರೀತ್ಯರ್ತ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ ಸೇವೆಯೊಂದಿಗೆ ಶ್ರೀಕ್ಷೇತ್ರ ಮಠದಲ್ಲಿ ಜಾತ್ರಾಮಹೋತ್ಸವ ನಡೆಯುತ್ತದೆ. ಬೆಳಗ್ಗೆಯಿಂದ ಶ್ರೀ ಸ್ವಾಮಿಯ ಸಣ್ಣ ಚಂದ್ರಮಂಡಲೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ, ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪ್ರಿತ್ಯಾರ್ಥ ಮುತೈದೆ ಸೇವೆ, ಸುಮಂಗಲಿಯರ ಮಡಿಲು ತುಂಬಿಸುವ ಕಾರ್ಯಕ್ರಮ, ದೊಡ್ಡ ಚಂದ್ರಮಂಡಲೋತ್ಸವ, ಪ್ರಾಕಾರ ಪಲ್ಲಕ್ಕಿಯೊಂದಿಗೆ ಶ್ರೀ ಸ್ವಾಮಿಯ ರಥೋತ್ಸವ ಭಿಜಿಯಂಗೈವದು, ರಥಾರೂಡರಾದ ಶ್ರೀ ಸ್ವಾಮಿಯವರಿಗೆ ಶ್ರೀ ಚಲುವರಾಯಸ್ವಾಮಿಯವರಿಂದ ಛಾಮರಸೇವೆ ಮತ್ತು ಮಹಾಮಂಗಳಾರತಿ ನಡೆಯಲಿದೆ.

ಇಂದು ರಥೋತ್ಸವ

ಸೋಮವಾರಪೇಟೆ: ತಾಲೂಕಿನ ಮೆಣಸ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿಯಲ್ಲಿ ಮಂಗಳವಾರದಿಂದ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿದ್ದು, ತಾ. 13 ರಂದು (ಇಂದು) ಮಹಾರಥೋತ್ಸವ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ಧ್ವಜಾರೋಹಣ, ಸ್ವಾಮಿಯವರಿಗೆ ಕಂಕಣಧಾರಣೆ, ಮಹಾಮಂಗಳಾರತಿ ನಡೆಯಿತು. ಬುಧವಾರ ಮಧನಾದಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ ಸೂರ್ಯ ಮಂಡಲೋತ್ಸವ, ರಾತ್ರಿ ದಾಸೋಹ ನಡೆಯಿತು.

ತಾ. 13ರಂದು ಬೆಳಿಗ್ಗೆ 5 ಗಂಟೆಗೆ ಶ್ರೀಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ತ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ ಸೇವೆ ಜರುಗಲಿದೆ. 7ಗಂಟೆಗೆ ಸಣ್ಣ ಚಂದ್ರಮಂಡಲೋತ್ಸವ, 9ಗಂಟೆಗೆ ಅಡ್ಡಪಲ್ಲಕ್ಕಿ ಉತ್ಸವ, 11 ಗಂಟೆಗೆ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಮುತ್ತೈದೆ ಸೇವೆ, ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ದಾಸೋಹ ಸೇವೆ, 1 ಗಂಟೆಗೆ ಸ್ವಾಮಿಯವರ ದೊಡ್ಡ ಚಂದ್ರಮಂಡಲೋತ್ಸವ, ಸಂಜೆ 5.30ಕ್ಕೆ ಪ್ರಾಕಾರ ಪಲ್ಲಕ್ಕಿ ಉತ್ಸವ ಜರುಗಲಿದೆ. 6 ಗಂಟೆಗೆ ರಥಾರೂಢರಾದ ಶ್ರೀ ಸ್ವಾಮಿಯವರಿಗೆ ಶ್ರೀ ಚೆಲುವರಾಯಸ್ವಾಮಿಯವರಿಂದ ಛಾಮರ ಸೇವೆ, ಮಹಾಮಂಗಳಾರತಿ ನಡೆಯಲಿದ್ದು, 6.30ಕ್ಕೆ ಶ್ರೀ ಸ್ವಾಮಿಯವರ ಮಹಾರಥೋತ್ಸವ ನೆರವೇರಲಿದೆ.

ರಾತ್ರಿ 8 ಗಂಟೆಗೆ ವೃಷಭಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಪೋವನ ಮಠಾಧೀಶರಾದ ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ನಂಜುಂಡೇಶ್ವರ ಉತ್ಸವ

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಶ್ರೀನಂಜುಡೇಶ್ವರ ದೇವಸ್ಥಾನದ ವಾರ್ಷಿಕೋತ್ಸವವು ಎರಡು ದಿನಗಳಕಾಲ ಅದ್ಧೂರಿಯಾಗಿ ನಡೆಯಿತು. ಸುಮಾರು 600 ವರ್ಷಗಳ ಇತಿಹಾಸವಿರುವ ಈ ದೇವಾಲಯವನ್ನು ಸುಮಾರು 10 ವರ್ಷಗಳ ಹಿಂದೆ ನವೀಕರಣಗೊಳಿಸಿ ಪ್ರತಿವರ್ಷ ವಿಜ್ರಂಭಣೆಯಿಂದ ವಾರ್ಷಿಕ ಪೂಜೆ ನಡೆಸಲಾಗುತ್ತಿದೆ. ಪ್ರವಾಸಿ ತಾಣವಾದ ದುಬಾರೆ ಸಮೀಪದ ಕಾವೇರಿ ನದಿ ತಟದಲ್ಲಿ ಈ ದೇವಾಲಯ ಸ್ಥಾಪನೆಯಾಗಿದೆ.

ನಿನ್ನೆ ಬೆಳಿಗ್ಗೆ ಕಾವೇರಿ ನದಿಯಲ್ಲಿ ಗಂಗಾಸ್ನಾನ ನಡೆದು ಪೂಜೆ ನೆರವೇರಿಸಿ ವೀರಭದ್ರ, ಶ್ರೀ ನಂಜುಂಡೇಶ್ವರ, ಶ್ರೀಬಸವೇಶ್ವರ, ಕನ್ನಂಬಾಡಿಯಮ್ಮ, ದೇವಿರಮ್ಮ, ಉತ್ಸವಮೂರ್ತಿiÀು ಮೆರವಣಿಗೆ ನಡೆಯಿತು. ಎರಡು ದಿನಗಳಕಾಲ ಅನ್ನಸಂತರ್ಪಣೆ ಮಾಡಲಾಯಿತು.

ದೇವಸ್ಥಾನದ ಆವರಣದಲ್ಲಿ ತಯಾರಿಸಿದ ಭವ್ಯ ರಂಗಮಂಟಪದಲ್ಲಿ ಎರಡು ದಿನ ವಿವಿಧ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದÀರ್ಭ ವಿವಿಧ ಮಠಗಳಿಂದ ಆಗಮಿಸಿದ್ದ ಮಠಾಧೀಶರಿಂದ ಪ್ರವಚನಾ ಕಾರ್ಯಕ್ರಮ ನಡೆಯಿತು. ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಮತ್ತು ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಶ್ರೀ ಅಪ್ಪಜಿ ಸ್ವಾಮಿಗಳು ಹಾಜರಿದ್ದು ಪ್ರವಚನ ನೀಡಿದರು. ಈ ಸಂದರ್ಭ ಮಾತನಾಡಿದ ಕೋಡಿ ಮಠದ ಸ್ವಾಮಿಗಳು, ದೇವಸ್ಥಾನಗಳಲ್ಲಿ ದಾರ್ಮಿಕ ಕಾರ್ಯಗಳು ನಡೆದರೆ ಸಮಾಜದಲ್ಲಿ ಶಾಂತಿ, ಸಮಾನತೆ ನೆಲೆಸುತ್ತದೆ ಎಂದರು.

ಶಾಂತಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಅನೇಕ ವರ್ಷಗಳಿಂದ ಆಭಿವೃದ್ಧಿ ಕಾಣದ ದೇವಾಲಯವನ್ನು ಅಭಿವೃದ್ಧಿ ಪಡಿಸಿ ಉತ್ಸವ ನಡೆಸುತ್ತಿರುವದಕ್ಕೆ ಕೋಡಿಮಠದ ಸ್ವಾಮೀಗಳ ಆಶೀರ್ವಾದ ಕಾರಣವೆಂದು ತಿಳಿಸಿದರು. ಸಮಿತಿ ಕಾರ್ಯದರ್ಶಿ ಪ್ರೇಮಾನಂದ ನಿರೂಪಿಸಿದರು. ನಿವೃತ್ತ ಶಿಕ್ಷಕ ನಂಜುಂಡ ವಂದಿಸಿದರು. ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷ ಲೋಕನಾಥ್, ಕಜಾಂಜಿ ಮುರಳಿ, ಸಹಕಾರ್ಯದರ್ಶಿ ರತೀಶ್, ನಿರ್ದೇಶಕರಾದ ಟಿ.ಕೆ.ರಘು, ಕೆ.ಸಿ.ಕಾರ್ಯಪ್ಪ,ಆಶಿಷ್ ಬೋಪಯ್ಯ, ಲೀಲಾವತಿ, ಪಾಪಯ್ಯ, ಮತ್ತು ಅಲ್ಲಿನ ನಿವಾಸಿ ತಾ.ಪಂ.ಸದಸ್ಯ ವಿಜುಚಂಗಪ್ಪ ಹಾಜರಿದ್ದರು.

ಶ್ರೀ ಚಾಮುಂಡೇಶ್ವರಿ ಪೂಜೆ

ಸಿದ್ದಾಪುರ: ಟೀಕ್‍ವುಡ್ ತೋಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಪೂಜೆಯು ತಾ. 19 ರಂದು ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆ. ಅಂದು ಮುಂಜಾನೆ 5 ಗಂಟೆಗೆ ಗಣಹೋಮ, ಬಿಂಬಶುದ್ಧಿ, ಶುದ್ಧ ಕಲಶ ಬಳಿಕ 9 ಗಂಟೆಗೆ ಚಂಡಿಕಾ ಯಾಗ ಏರ್ಪಡಿಸಲಾಗಿದೆ. ಮಧ್ಯಾಹ್ನ 1 ಗಂಟೆಗೆ ಪೂರ್ಣಾಹುತಿ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6 ಗಂಟೆಗೆ ತ್ರಾಯಂಬಕ ಸೇವೆಯೊಂದಿಗೆ ಚಂಡೆವಾದ್ಯ, ರಂಗಪೂಜೆಯೊಂದಿಗೆ ಸಂಜೆ 6 ಗಂಟೆಗೆ ರಾತ್ರಿ 7.30ಕ್ಕೆ ಮಹಾಪೂಜೆ, ಅನಂತರ ಭರತನಾಟ್ಯ ವಿದ್ವಾನ್ ಸುಧೀರ್‍ರಾವ್ ಸಂಗಡಿಗರಿಂದ ನಡೆಯಲಿದೆ. ರಾತ್ರಿ 9 ಗಂಟೆಗೆ ದೇವಿಯ ನೃತ್ಯದರ್ಶನ ನೆರವೇರಲಿದೆ ಎಂದು ದೇವಾಲಯ ಮುಖ್ಯಸ್ಥ ಕಂಬೀರಂಡ ನಂಜಪ್ಪ ತಿಳಿಸಿದ್ದಾರೆ.