ಮಡಿಕೇರಿ, ಏ. 13 : ಮನುವಾದಿಗಳ ವ್ಯವಸ್ಥಿತ ಪಿತೂರಿ ಹಾಗೂ ದಲಿತರ ದಡ್ಡತನಗಳಿಂದಾಗಿ ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ದಲಿತ ನಾಯಕರಾಗಿ ಪ್ರತಿಬಿಂಬಿಸಲ್ಪಡು ತ್ತಿದ್ದಾರೆ ಎಂದು ಆರೋಪಿಸಿರುವ ಬಹುಜನ ವಿದ್ಯಾರ್ಥಿ ಸಂಘ, ಈ ಬಾರಿಯ ಡಾ.ಅಂಬೇಡ್ಕರ್ ಜಯಂತಿಯನ್ನು ಪ್ರತಿಯೊಬ್ಬರು ಅರ್ಥಪೂರ್ಣವಾಗಿ ಆಚರಿಸ ಬೇಕೆಂದು ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಯೋಜಕ ಸಿ.ಜೆ.ಮೋಹನ್ ಮೌರ್ಯ, ಹೊಸ ಪೀಳಿಗೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶವನ್ನು ಸಾರುವ ಆಚರಣೆಗಳು ಸದಾ ನಡೆಯುತ್ತಿರಬೇಕು.
ಹಿಂದುಳಿದ ಜಾತಿಗಳನ್ನು, ಧಾರ್ಮಿಕ ಅಲ್ಪಸಂಖ್ಯಾತರನ್ನು ಬೇರೆ ಬೇರೆ ಜಾತಿಯ ಪ್ರಗತಿಪರರನ್ನು ಒಳಗೊಳ್ಳುವಂತಹ, ಅವರಲ್ಲಿ ಅರಿವು ಮೂಡಿಸುವಂತಹ ಕಾರ್ಯ ಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.
ಆ ಮೂಲಕ ಹಿಂದುಳಿದ ಜಾತಿಗಳಿಗೆ ಸೇರಿದ ಸಮಾಜ ಪರಿವರ್ತನಾ ಕಾರಣರಾದ ಮಹಾತ್ಮ ಜ್ಯೋತಿ ಬಾಪುಲೆ, ಛತ್ರಪತಿ ಶಾಹುಮಹಾರಾಜ್, ಶ್ರೀನಾಲ್ವಡಿ ಕೃಷ್ಣ ರಾಜ ಒಡೆಯರ್, ಶ್ರೀನಾರಾಯಣ ಗುರು ಮುಂತಾದವರನ್ನು ಪರಿಚಯಿಸುವದು ಸೂಕ್ತ. ಬಾಬಾ ಸಾಹೇಬರು ನೀಡಿದ ಕೊಡುಗೆÉಗಳನ್ನು ವಿವರಿಸಿ ಹೇಳುವದು ಅತ್ಯಂತ ತುರ್ತು ಕೆಲಸವಾಗಿದೆ. ಇದು ಬಹುಜನ ಸಮಾಜ ನಿರ್ಮಾಣಕ್ಕೆ ಬೇಕಾದ ಮೂಲಭೂತ ತತ್ವವಾಗಿದೆ. ಇದರ ಮೂಲಕ ಬಾಬಾ ಸಾಹೇಬರ ಬಹುಜನರು ಈ ದೇಶವನ್ನು ಆಳುವ ದೊರೆಗಳಾಗಬೇಕು ಎಂಬ ಕನಸನ್ನು ಸುಲಭವಾಗಿ ಈಡೇರಿಸಬಹುದಾಗಿದೆ ಎಂದು ಮೋಹನ್ ಮೌರ್ಯ ತಿಳಿಸಿದರು.
ಬಹುಜನ ಸಮಾಜವನ್ನು ಒಂದುಗೂಡಿಸದೆ ಡಾ.ಅಂಬೇಡ್ಕರ್ ಅವರÀ ಸಮಾನತೆಯ ಕನಸು ಎಂದಿಗೂ ನನಸಾಗುವದಿಲ್ಲ ಎಂದು ಅಭಿಪ್ರಾಯಪಟ್ಟರು.
ತಾ. 14 ರಂದು ಮಡಿಕೇರಿಯ ಉಕ್ಕುಡದ ಡಾ.ಅಂಬೇಡ್ಕರ್ ಭವನ ಹಾಗೂ ಕುಶಾಲನಗರದ ಬಸವೇಶ್ವರ ಬಡಾವಣೆಯ ವಸತಿ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವದೆಂದು ಮೋಹನ್ ಮೌರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರಸನ್ನ, ಸೋಮವಾರಪೇಟೆ ತಾಲೂಕು ಸಂಯೋಜಕರಾದ ಶರತ್ ಹಾಗೂ ಕುಶಾಲನಗರದ ವಿದ್ಯಾರ್ಥಿ ಮುಖಂಡ ತೇಜಸ್ ಉಪಸ್ಥಿತರಿದ್ದರು.