ಮಡಿಕೇರಿ, ಏ. 12: ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ದಿಸೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ನಡೆಸಲಾದ ಉನ್ನತ ಮಟ್ಟದ ಸಭೆ ನಡೆಸುವ ಮೂಲಕ ಕೊಡಗಿನ ಜನ ಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ ಎಂದು ಸ್ಥಳೀಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಕೊಡಗಿನ ಗಂಭೀರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸುವಾಗ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ದಿಡ್ಡಳ್ಳಿಯ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ವಿಷಯದಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಸಹಮತ ಹೊಂದಿದ್ದಾರೆ. ಈಗಾಗಲೇ ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವ ಕೆಲಸವನ್ನು ಮಾಡಲಾಗಿದೆ. ಹೀಗಿದ್ದೂ ಮುಖ್ಯಮಂತ್ರಿಗಳು ಕೇವಲ ಜಿಲ್ಲೆಯ ಅಧಿಕಾರಿಗಳನ್ನು ಕರೆಸಿಕೊಂಡು, ವೀರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರ ಅರಿವಿಗೂ ಬಾರದಂತೆ ಸಭೆ ನಡೆಸಿರುವದು ಸರಿಯಾದ ಕ್ರಮವಲ್ಲವೆಂದು ಬೊಟ್ಟು ಮಾಡಿದ್ದಾರೆ.
ಕೆ.ಜಿ.ಬಿ. ಅಸಮಾಧಾನ
ದಿಡ್ಡಳ್ಳಿ ನಿರಾಶ್ರಿತರ ಬಗ್ಗೆ ಕರೆಯಲಾದ ಉನ್ನತ ಮಟ್ಟದ ಸಭೆಗೆ ಜಿಲ್ಲೆಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಸಭೆ ನಡೆಸಿರುವದು ಖಂಡನೀಯ ಎಂದು ಶಾಸಕ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದಿಡ್ಡಳ್ಳಿ ಹಾಗೂ ಜಿಲ್ಲೆಯ ವಿವಿಧೆಡೆಗಳ ನಿವೇಶನ ರಹಿತರಿಗೆ ನಿವೇಶನವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕರೆದ ಉನ್ನತ ಮಟ್ಟದ ಸಭೆಗೆ ಜಿಲ್ಲೆಯ ಶಾಸಕರು ಹಾಗೂ ಸಂಸದರಿಗೆ ಮಾಹಿತಿ ನೀಡದೆ ಸಭೆ ನಡೆಸಿರುವದು ಸರಿಯಾದ ಕ್ರಮವಲ್ಲ ಎಂದರು. ದಿಡ್ಡಳ್ಳಿ ನಿರಾಶ್ರಿತರಿಗೆ ನಿವೇಶನ ನೀಡುವುದಕ್ಕೆ ತಮ್ಮ ವಿರೋಧವಿಲ್ಲ ಎಂದರು.
ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೊಡಗು ಜಿಲ್ಲೆಯಲ್ಲಿ ಜೀತ ಪದ್ಧತಿ ಜೀವಂತವಾಗಿದೆ ಎಂದು ಕೆಲವು ಮುಖಂಡರುಗಳ ಮಾತನ್ನು ಕೇಳಿ ಹೇಳಿಕೆ ನೀಡಿರುವುದು ಖಂಡನೀಯ. ಗೌರವ ಸ್ಥಾನದಲ್ಲಿರುವ ಕಂದಾಯ ಸಚಿವರು ಈ ರೀತಿ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ಶಾಸಕರು ಅಭಿಪ್ರಾಯಪಟ್ಟರು.
ಗುಂಡು ಆರೋಪಿ ಸೆರೆ
(ಮೊದಲ ಪುಟದಿಂದ)ದಿಡ್ಡಳ್ಳಿಗೆ ತೆರಳಿದ್ದು, ಪರಸ್ಪರ ಮಾತಿನ ಚಕಮಕಿ ಏರ್ಪಟ್ಟಿದೆ. ಈ ವಿಚಾರದಲ್ಲಿ ಸಿಟ್ಟುಕೊಂಡ ಪೂಣಚ್ಚ ಸೋಮವಾರ ರಾತ್ರಿ 10 ಗಂಟೆಗೆ ತನ್ನ ಬೈಕ್ನಲ್ಲಿ ಬಂದೂಕು ಸಹಿತ ದಿಡ್ಡಳ್ಳಿಗೆ ಬಂದಿದ್ದು, ಮೊದಲು 2 ಸುತ್ತು ಗಾಳಿಗೆ ಗುಂಡು ಹಾರಿಸಿದ್ದಾನೆ. ಬಳಿಕ ಕೋವಿ ಕೆಳಗೆ ಇಳಿಸುವ ಸಂದರ್ಭ ಯಾರೂ ವಾಸವಿಲ್ಲದ ಗುಡಿಸಲಿಗೆ ಗುಂಡು ಹಾರಿದೆ. ಈ ಸಂದರ್ಭ ಎಚ್ಚರಗೊಂಡ ಆದಿವಾಸಿಗಳನ್ನು ಕಂಡ ಪೂಣಚ್ಚ ಸ್ಥಳದಿಂದ ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಪರಾರಿಯಾಗುವ ಸಂದರ್ಭ ತುಂಬಿದ ಮದ್ದುಗುಂಡು ಬಿದ್ದಿದ್ದು, ಗುಂಡು ಹಾರಿಸಿದ ಮದ್ದುಗುಂಡನ್ನು ಸಮೀಪದ ಆನೆ ಕಂದಕಕ್ಕೆ ಎಸೆಯಲಾಗಿದೆ ಎಂದು ಸಿದ್ದಾಪುರ ಠಾಣಾಧಿಕಾರಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ ಡಿವೈಎಸ್ಪಿ ಸೋಮಲಿಂಗಪ್ಪ ಛಬ್ಬಿ ಮಾರ್ಗದರ್ಶನಲ್ಲಿ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ನೇತೃತ್ವದಲ್ಲಿ ಎ.ಎಸ್.ಐ ಗಣಪತಿ, ಲಕ್ಷ್ಮೀಕಾಂತ್, ಲವ, ಲೋಕೇಶ್, ಪೃಥ್ವಿ ಇದ್ದರು.
ಭಯಗೊಂಡಿರುವ ನಿರಾಶ್ರಿತರು
ದಿಡ್ಡಳ್ಳಿಯಲ್ಲಿ ಸೋಮವಾರದಂದು ನಿರಾಶ್ರಿತ ಆದಿವಾಸಿಗಳ ಗುಡಿಸಲು ಒಂದಕ್ಕೆ ಗುಂಡು ಹಾರಿಸಿದ ಘಟನೆಯಿಂದಾಗಿ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ಭಯಭೀತರಾಗಿದ್ದಾರೆ.
ಈ ಬಗ್ಗೆ ಘಟನೆ ಸಂದರ್ಭ ಸ್ಥಳದಲ್ಲಿದ್ದ ಪಿ. ಬಸವ ಮಾತನಾಡಿ ತಾನು ರಾತ್ರಿ ವೇಳೆ ಮನೆಯ ಬಳಿ ಇರುವ ಸಂದರ್ಭದಲ್ಲಿ ಓರ್ವ ವ್ಯಕ್ತಿ ಬೈಕ್ನಲ್ಲಿ ಆಗಮಿಸಿ ಗುಡಿಸಲಿನತ್ತ ಗುಂಡು ಹಾರಿಸಿದ್ದ ಶಬ್ದ ಕೇಳಿ ತಾನು ಅತ್ತ ದಾವಿಸಿದ ಸಂದರ್ಭ ಆತ ನೇರವಾಗಿ ನನ್ನತ್ತ ಗುಂಡು ಹಾರಿಸಲು ಯತ್ನಿಸಿದ. ತಾನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದು, ನಂತರ ಹಾಡಿಯ ನಿವಾಸಿಗಳು ಆತನನ್ನು ಹುಡುಕುವ ಸಂದರ್ಭದಲ್ಲಿ ಆತ ರಾತ್ರಿ ತಲೆಮರೆಸಿಕೊಂಡನು ಎಂದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಾಡಿಯ ನಿವಾಸಿ ರಂಜು ಮಾತನಾಡಿ, ತಮ್ಮನ್ನು ಗುಂಡು ಹಾರಿಸಿ ಸಾಯಿಸಲು ಯತ್ನಿಸಿರುವದು ಖಂಡನೀಯ. ತಾವು ಶಾಶ್ವತ ಸೂರು ಸಿಗುವವರೆಗೂ ಇಲ್ಲಿಂದ ಕದಲುವದಿಲ್ಲ ಎಂದರು. ಒಟ್ಟಿನಲ್ಲಿ ಒಂದೆಡೆ ಮಳೆ ಹಾಗೂ ಸಿಡಿಲ ಅಬ್ಬರದಿಂದ ಹೆದರಿ ಗುಡಿಸಲಿನಲ್ಲಿ ವಾಸವಾಗಿರುವ ದಿಡ್ಡಳ್ಳಿಯ ಆದಿವಾಸಿ ನಿರಾಶ್ರಿತರು ಗುಂಡಿನ ದಾಳಿಯಿಂದ ಮತ್ತಷ್ಟು ಭಯಭೀತರಾಗಿದ್ದಾರೆ. -ವಾಸು ಆಚಾರ್ಯ