ಸೋಮವಾರಪೇಟೆ, ಏ. 13: ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯ ವತಿಯಿಂದ 'ನಮ್ಮ ಊರು ನಮ್ಮ ಕೆರೆ' ಯೋಜನೆಯಡಿ ರಾಜ್ಯಾ ದಾದ್ಯಂತ 100 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಕೊಡಗಿನ ಏಕೈಕ ಕೆರೆಯಾಗಿ ಯರಪಾರೆ ಗ್ರಾಮದ ಬಪ್ಪನಕಟ್ಟೆ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ರೂ. 4.50 ಲಕ್ಷ ನೆರವು ನೀಡಿದ್ದಾಗಿ ತಿಳಿಸಿದರು.
ಕಳೆದ ಅನೇಕ ದಶಕಗಳಿಂದ ಹೂಳು ತುಂಬಿ ನೀರು ಮಾಯವಾಗಿರುವ ಬಪ್ಪನಕಟ್ಟೆ ಕೆರೆಯ ಹೂಳೆತ್ತುವದು, ಏರಿ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಗೋಣಿಮರೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ.ಗ್ರಾ.ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮಶೆಟ್ಟಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ರಾಜ್ಯಾದ್ಯಂತ 100 ಕೆರೆಗಳನ್ನು ಸ್ಥಳೀಯ ಪಂಚಾಯಿತಿಗಳ ಸಹಕಾರ ಪಡೆದು ಪುನಶ್ಚೇತ ನಗೊಳಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಮುಂದಿನ ವರ್ಷದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೀರಾವರಿ ಕೆರೆಗಳನ್ನು ಪುನಶ್ಚೇತನಗೊಳಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.
ತಾ.ಪಂ. ಸದಸ್ಯೆ ಸವಿತಾ ಈರಪ್ಪ ಮಾತನಾಡಿ, ಕೆರೆ ಕಟ್ಟೆಗಳಲ್ಲಿ ನೀರಿದ್ದರೆ ಊರು ಸಮೃದ್ಧಿಯಿಂದ ಇರುತ್ತದೆ. ಈ ನಿಟ್ಟಿನಲ್ಲಿ ಧರ್ಮಾಧಿಕಾರಿಗಳು ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಿರುವದು ಶ್ಲಾಘನೀಯವೆಂದು ಅವರು ಒಟ್ಟು ರೂ. 10 ಲಕ್ಷದಲ್ಲಿ ಕೆರೆಗೆ ಕಾಯಕಲ್ಪ ನೀಡಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಗೋಣಿಮರೂರು ಗ್ರಾ.ಪಂ. ಅಧ್ಯಕ್ಷೆ ಸವಿತಾ ಸುಕುಮಾರ್, ಗಣಗೂರು ಗ್ರಾಪಂ. ಸದಸ್ಯರಾದ ಕವಿತಾ ಧರ್ಮಪ್ಪ, ಮಂಜುನಾಥ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರೇವಣ್ಣ, ಯೋಜನಾಧಿಕಾರಿ ವೈ. ಪ್ರಕಾಶ್, ಪಿಡಿಒ ಅಶ್ವಥ್, ಯೋಜನೆಯ ಕೃಷಿ ಮೇಲ್ವಿಚಾರಕ ಕೆ.ಪಿ.ನಾಗರಾಜ್, ಸೇವಾಪ್ರತಿನಿಧಿ ಉಷಾ, ಪ್ರಮುಖರಾದ ಪೂವಯ್ಯ, ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.