ಸೋಮವಾರಪೇಟೆ, ಏ. 13: ಕೂತಿನಾಡು ಸಬ್ಬಮ್ಮದೇವಿಯ ಸುಗ್ಗಿ ಎಂದೇ ಖ್ಯಾತಿ ಪಡೆದಿರುವ ನಗರಳ್ಳಿ ಸುಗ್ಗಿ ಉತ್ಸವ ತಾ. 17 ರಂದು ನಡೆಯಲಿದ್ದು, ಸುಗ್ಗಿಯ ಆಚರಣೆಗೆ ಸಂಬಂಧಿಸಿದಂತೆ ದೇವಿಯ ತವರೂರಾದ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಶಸ್ತ್ರ ಪೂಜೆ ನಡೆಯಿತು.

ನಗರಳ್ಳಿ ಸುಗ್ಗಿ ವ್ಯಾಪ್ತಿಗೊಳಪಡುವ ಮನೆಗಳಲ್ಲಿನ ಕೋವಿಗಳನ್ನು ಕೂತಿ ಗ್ರಾಮಕ್ಕೆ ತಂದು ಚಾವಡಿಕಟ್ಟೆಯ ಮೇಲಿಟ್ಟು ಸಾಮೂಹಿಕ ಪೂಜೆ ನೆರವೇರಿಸಲಾಯಿತು. ನಂತರ ದೇವರ ಕಟ್ಟೆಗೆ ಪ್ರದಕ್ಷಿಣೆ ಬಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಹಬ್ಬದಾಚರಣೆಗೆ ಚಾಲನೆ ನೀಡಲಾಯಿತು.

ಸುಗ್ಗಿ ಕಟ್ಟುಪಾಡುಗಳು ಸುಮಾರು ಒಂದು ವಾರಗಳ ಕಾಲ ನಡೆಯಲಿದೆ. ನಗರಳ್ಳಿ ಸುಗ್ಗಿ ವ್ಯಾಪ್ತಿಗೆ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಳ್ಳಿ, ಬೀಕಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಓಡಳ್ಳಿ ಒಳಪಡಲಿದ್ದು, ಸುಗ್ಗಿ ಆಚರಣೆಯ ಕಟ್ಟುಪಾಡುಗಳನ್ನು ಅನುಸರಿಸಲಾಗುತ್ತಿದೆ.

ನಗರಳ್ಳಿ ಸುಗ್ಗಿ ಉತ್ಸವವು ತಾ.17ರ ಸೋಮವಾರ ನಗರಳ್ಳಿಯಲ್ಲಿನ ಸುಗ್ಗಿಕಟ್ಟೆ ಹಾಗೂ 12 ದೇವರುಗಳ ಬನದಲ್ಲಿ ವಿಶೇಷ ಆಚರಣೆಯೊಂದಿಗೆ ನಡೆಯಲಿದೆ. ಸುಗ್ಗಿ ಹಬ್ಬದಾಚರಣೆಗೆ ಚಾವಡಿಕಟ್ಟೆಯಲ್ಲಿ ಚಾಲನೆ ನೀಡುವ ಸಂದರ್ಭ ಸುಗ್ಗಿ ಆಚರಣಾ ಸಮಿತಿ ಅಧ್ಯಕ್ಷ ಕೆ.ಟಿ. ಜೋಯಪ್ಪ, ಕೂತಿ ಗ್ರಾಮಾಧ್ಯಕ್ಷ ಡಿ.ಎ. ಪರಮೇಶ್, ಅರ್ಚಕ ಅನಂತರಾಮ್ ಹಾಗೂ ಗ್ರಾಮದ ಪ್ರಮುಖರುಗಳು ಹಾಜರಿದ್ದರು.