ಸೋಮವಾರಪೇಟೆ,ಏ.13: ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ತಾಲೂಕು ವತಿಯಿಂದ ತಾ. 15ರಂದು ಶನಿವಾರಸಂತೆ ಸಮೀಪದ ಬೆಳ್ಳಾರಳ್ಳಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುವದು ಎಂದು ಪಕ್ಷದ ಎಸ್‍ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಆರ್. ಪಾಲಾಕ್ಷ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತಾ. 15ರಂದು ಬೆಳಿಗ್ಗೆ 10.30ಕ್ಕೆ ಬೆಳ್ಳಾರಳ್ಳಿ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಎಸ್‍ಸಿ ಮೋರ್ಚಾ ಅಧ್ಯಕ್ಷ ಕೆ.ಕೆ. ಯೋಗೇಶ್ ವಹಿಸಲಿದ್ದು, ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯ ಕುಶಾಲಪ್ಪ, ಲೀಲಾವತಿ, ದಸಂಸ ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ, ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಹೆಚ್.ಎನ್. ಸಂದೀಪ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಗಣೇಶ್, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಸ್. ನಿರಂಜನ್ ಅವರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಸಂಸ್ಥಾಪನಾ ದಿನವಾದ ಏ.6ರಿಂದ ಅಂಬೇಡ್ಕರ್ ಜಯಂತಿ ದಿನವಾದ ಏ.14ರವರೆಗೆ ಬಿಜೆಪಿ ವತಿಯಿಂದ ಗ್ರಾಮಮಟ್ಟದಲ್ಲಿ ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿಸುವ ಕಾರ್ಯವನ್ನು ಪಕ್ಷ ಮಾಡುತ್ತಿದೆ ಎಂದು ಪಾಲಾಕ್ಷ ತಿಳಿಸಿದರು.

ಗೋಷ್ಠಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಎಸ್.ಸಿ. ಮೋರ್ಚಾ ಅಧ್ಯಕ್ಷ ಯೋಗೇಶ್, ಪದಾಧಿಕಾರಿ ಕೆ.ಚಂದ್ರಶೇಖರ್ ಅವರುಗಳು ಉಪಸ್ಥಿತರಿದ್ದರು.