ಸೋಮವಾರಪೇಟೆ,ಏ.12: ವಿಷ ಸೇವಿಸಿ ಕೃಷಿಕರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಕೇರಿ ಗ್ರಾಮದಲ್ಲಿ ನಡೆದಿದ್ದು, ಸಾಲ ನೀಡಿದವರ ಕಿರುಕುಳವೇ ಘಟನೆಗೆ ಕಾರಣ ಎಂದು ಪತ್ನಿ ಪೊಲೀಸ್ ದೂರು ನೀಡಿದ್ದಾರೆ.ತಾಕೇರಿಯ ಕೋಡೆಗದ್ದೆ ನಿವಾಸಿ ಪೊನ್ನಪ್ಪ ಎಂಬವರ ಪುತ್ರ, ಕೃಷಿಕ ನಂದೀಶ್ (40) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ಇಂದು ಮಧ್ಯಾಹ್ನ 2.30ರ ಸುಮಾರಿಗೆ ಮನೆ ಪಕ್ಕದ ಕಾಫಿ ತೋಟದಲ್ಲಿ ವಿಷ ಸೇವಿಸಿದ್ದಾರೆ.ನಂತರ ಮನೆಗೆ ಆಗಮಿಸಿದ ನಂದೀಶ್ ತೀವ್ರ ಅಸ್ವಸ್ಥರಾಗಿದ್ದು, ತಕ್ಷಣ ಮನೆಯವರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲು ಶಿಫಾರಸ್ಸು ಮಾಡಿದ್ದು, ನಂದೀಶ್ ಅವರನ್ನು ಆಂಬ್ಯುಲೆನ್ಸ್ ವಾಹನದಲ್ಲಿ ಮಲಗಿಸಿದ ಸಂದರ್ಭ ಅಸು ನೀಗಿದ್ದಾರೆ.
ಇಲ್ಲಿನ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಮೃತರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ತಾ. 13ರಂದು (ಇಂದು) ತಾಕೇರಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಕಿರುಕುಳ ಆರೋಪ: ಕೃಷಿ ಸೇರಿದಂತೆ ಇತರ ಕೆಲಸಗಳಿಗಾಗಿ ನಂದೀಶ್ ಅವರು ರೂ. 5 ಲಕ್ಷಕ್ಕೂ ಅಧಿಕ ಹಣವನ್ನು ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಹಿಂತಿರುಗಿಸಲಾರದೆ ಬೇಸತ್ತ ನಂದೀಶ್ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಪತಿಯ ಸಾವಿಗೆ ಸಾಲ ಕೊಟ್ಟಿದ್ದ ಮಂದಿಯ ಕಿರುಕುಳವೇ ಕಾರಣ ಎಂದು ಪತ್ನಿ ಸವಿತಾ ಪೊಲೀಸರಿಗೆ ದೂರು ನೀಡಿದ್ದಾರೆ.
ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಮಂಚಯ್ಯ ಅವರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.