ಮಡಿಕೇರಿ, ಏ. 14: ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆಯ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಆಚರಿಸಲಾಯಿತು. ಬಹುಮಾನ ವಿತರಿಸಿ ಮಾತನಾಡಿದ ಡಾ. ವೈ. ವಿಶ್ವನಾಥ್ ಶೆಟ್ಟಿ ಅರಣ್ಯ ನಾಶ ತಡೆಗೆ ಇನ್ನಷ್ಟು ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಹೇಳಿದರು. ನಂತರ ವಿಶ್ವ ವಿದ್ಯಾನಿಲಯ ವನ್ನು ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ 35 ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿ.ಇ.ಓ. ಚಾರುಲತಾ ಸೋಮಲ್ ಆತ್ಮವಿಶ್ವಾಸದ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದರು.

ಡಾ. ಸಿ. ವಾಸುದೇವಪ್ಪ ಉದ್ಘಾಟಿಸಿ ಬಹುಮಾನ ವಿತರಣೆ ಮಾಡಿದರು. ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಎರಡನೇ ಬಾರಿಗೆ ಚಿನ್ನದ ಪದಕ ಪಡೆದ ಭಾವಿಕಾ, ಪೂಜಾ, ಬಿ.ಎಸ್.ಸಿ ಅರಣ್ಯ ಶಾಸ್ತ್ರ ವಿಭಾಗದ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಬಂದಿರುವ ಆಸಿಯಾ ರಸ್ಲಿನ್, ಕೊಡಗು ವಿಜ್ಞಾನಿಗಳ ವೇದಿಕೆ ಚಿನ್ನದ ಪದಕವನ್ನು, ವಲಯ ಅರಣ್ಯ ಅಧಿಕಾರಿಯಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಯನ್ನು, ಉತ್ತಮ ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಪದಕವನ್ನು, ಉತ್ತಮ ಪ್ರತಿಭಾ ವಿದ್ಯಾರ್ಥಿ ಪಾರಿತೋಷಕವನ್ನು ಭಾವಿಕಾ ಹಾಗೂ ಸತತ ಮೂರನೇ ಬಾರಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಗ್ರ ಕ್ರೀಡಾ ತಂಡ ಪಾರಿತೋಷಕವನ್ನು ವಿತರಿಸಿದರು. ವಿದ್ಯಾರ್ಥಿನಿಲಯ ಹಾಗೂ ಸಣ್ಣ ಮಕ್ಕಳ ಆಟದ ಮೈದಾನ ಉದ್ಘಾಟಿಸಲಾಯಿತು ಮತ್ತು ಮಹಾವಿದ್ಯಾಯದ ಸ್ಮರಣ ಸಂಚಿಕೆ ‘ಕಾನನ ಕಗ್ಗ’ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಡೀನ್ ಡಾ. ಸಿ.ಜಿ. ಕುಶಾಲಪ್ಪ ಮಾತನಾಡಿ, ಕಾಲೇಜು ಅಭಿವೃದ್ಧಿಗೆ ವಿಶ್ವವಿದ್ಯಾಲಯ ಸಕಲ ಸವಲತ್ತು ನೀಡಿಕೊಂಡು ಬಂದಿದೆ. ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅರಣ್ಯ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎಂ. ದೇವಗಿರಿ, ಕೃಷಿ ಅರಣ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಹೆಗಡೆ, ಕೃಷಿ ಉತ್ಪನ್ನ ವಿಭಾಗದ ಮುಖ್ಯಸ್ಥ ಎಂ.ಎನ್. ರಮೇಶ್ ವಿದ್ಯಾರ್ಥಿ ಕಲ್ಯಾಣ ಸಹಾಯಕ ನಿರ್ದೇಶಕ ಡಾ. ಜೆಡೇಗೌಡರು, ಕಾಲೇಜಿನ ಮೊದಲ ಡಿಐ ಡಾ. ಎಂ.ಸಿ. ದೇವಯ್ಯ ಡಿ ಐ ಬಿ.ಸಿ. ಉತ್ತಯ್ಯ ಮತ್ತು ಮಾಜಿ ಆಡಳಿತ ಮಂಡಳಿ ಸದಸ್ಯರು ಪಿ.ಟಿ. ಪೂಣಚ್ಚ ಉಪಸ್ಥಿತರಿದ್ದರು. ಜೀವಿತ ಪ್ರಾರ್ಥಿಸಿ, ಮನು ಸ್ವಾಗತಿಸಿ, ಅರ್ಜುನ್ ವಂದಿಸಿದರು.