ಮಡಿಕೇರಿ, ಏ.14 : ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಮಾತನಾಡಿ, ಡಾ.ಅಂಬೇಡ್ಕರ್ ಅವರಿಗೆ ಸ್ಥಾನಮಾನಗಳು ಒಬ್ಬ ದಲಿತ ಎನ್ನುವ ಕಾರಣಕ್ಕಾಗಿ ಸಿಗಲಿಲ್ಲ. ಬದಲಿಗೆ ಅವರಲ್ಲಿದ್ದ ಅಪಾರ ಜ್ಞಾನದಿಂದ ಲಭಿಸಿತು. ಸಂವಿಧಾನ ರಚನೆಯಂತಹ ಮಹತ್ತರ ಜವಬ್ದಾರಿಯನ್ನು ನಿಭಾಯಿಸಿದ್ದು, ಹೆಮ್ಮೆಯ ವಿಚಾರವೆಂದರು. ಅಂಬೇಡ್ಕರ್ ಅವರ ಸಮಾನತೆಯ ಆದರ್ಶಗಳನ್ನು ಪ್ರತಿಯೊಬ್ಬ ರಾಜಕಾರಣಿಯೂ ಅನುಸರಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಈ ದೇಶಕ್ಕೆ ಡಾ.ಅಂಬೇಡ್ಕರ್ ಅವರು ನೀಡಿದ ಕೊಡುಗೆ ಅಪಾರವೆಂದು ಶ್ಲಾಘಿಸಿದರು. ಅಂಬೇಡ್ಕರ್ ವಿಚಾರಧಾರೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿದ್ದು, ಸಂವಿಧಾನ ಪ್ರತಿಯೊಬ್ಬರಲ್ಲೂ ಆತ್ಮ ವಿಶ್ವಾಸವನ್ನು ತುಂಬಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯರುಗಳಾದ ತಜಸ್ಸುಂ, ಲೀಲಾಶೇಷಮ್ಮ, ನಾಮ ನಿರ್ದೇಶಿತ ಸದಸ್ಯರುಗಳಾದ ಕೆ.ಎಂ.ವೆಂಕಟೇಶ್, ಉದಯ್ ಕುಮಾರ್, ಎಂ.ಇ. ಹನೀಪ್, ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು.ಅಬ್ದುಲ್ರಜಾಕ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ಪ್ರಮುಖರಾದ ಪಿ.ಸಿ.ಬೇಲಯ್ಯ, ಪ್ರೇಮಾ ಕೃಷ್ಣಪ್ಪ, ಹೆಚ್.ಸಿ.ಚಂದ್ರು, ಪುಲಿಯಂಡ ಜಗದೀಶ್ ಮತ್ತಿತರ ಪ್ರಮುಖರು ಹಾಜರಿದ್ದು ಡಾ.ಅಂಬೇಡ್ಕರ್ ಅವರ ಗುಣಗಾನ ಮಾಡಿದರು.