ಮಡಿಕೇರಿ, ಏ. 14 : ಜಿಲ್ಲೆಯ ವಿವಿಧೆಡೆ ಇಂದು ಸೌರಮಾನ ಯುಗಾದಿಯೊಂದಿಗೆ ವಿಶು ಹಬ್ಬದೊಂದಿಗೆ ಪೂಜಾದಿಗಳನ್ನು ನೆರವೇರಿಸಲಾಯಿತು.ವಿಶೇಷವಾಗಿ ಕೇರಳ ಸಮಾಜ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಪೂಜಾದಿಗಳನ್ನು ಸಲ್ಲಿಸುವದರೊಂದಿಗೆ ವಿಶು ಕಣಿ ಪೂಜೆ ನೆರವೇರಿಸಿದರು. ದೇವಾಲಯಗಳಲ್ಲಿ ಸೌರಮಾನ ಯುಗಾದಿ ಪ್ರಯುಕ್ತ ವಿಶೇಷ ಪೂಜೆ, ಪಂಚಾಂಗ ಶ್ರವಣ ನಡೆಸಲಾಯಿತು. ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿಯೂ ಅರ್ಚಕ ಪ್ರಸನ್ನಭಟ್ ಪಂಚಾಂಗ ಶ್ರವಣದೊಂದಿಗೆ ಪೂಜೆ ನೆರವೇರಿಸಿದರು.ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಅಯ್ಯಪ್ಪ ದೇವಾಲಯ ವತಿಯಿಂದ ವಿಶು ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ವಿಶುಕಣಿ ಏರ್ಪಡಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀಶ್, ಪ್ರಮುಖರಾದ ಡಾ. ಪಾಟ್ಕರ್, ವಿನೋದ್, ಮಹೇಶ್‍ಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು.
ನಗರ ಮಾತ್ರವಲ್ಲದೆ ಕೊಡಗಿನ ವಿವಿಧೆಡೆ ಮುತ್ತಪ್ಪ ಹಾಗೂ ಅಯ್ಯಪ್ಪ ದೇವಾಲಯಗಳಲ್ಲಿ ಈ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಆಲೂರುಸಿದ್ದಾಪುರ : ಮಾಲಂಬಿ,ಮುಳ್ಳೂರು, ಮಲ್ಲೇಶ್ವರ, ಕಣಿವೆ ಬಸವನಹಳ್ಳಿ, ನಿಡ್ತ ಸೇರಿದಂತೆ ಕೊಡ್ಲಿಪೇಟೆ ಶನಿವಾರಸಂತೆ ಸುತ್ತ ಮುತ್ತಲಿನ ಕೇರಳೀಯರು ಇಂದು ವಿಶು ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದರು,
ದೇವರ ಕೋಣೆಯಲ್ಲಿ ಚಿನ್ನಾಭರಣ ಸೇರಿದಂತೆ ಹಣ ಹಾಗೂ ವಿವಿಧ ತರಕಾರಿಗಳನ್ನು ರಾತ್ರಿ ಜೋಡಿಸಿಟ್ಟು ಮನೆಯವರೆಲ್ಲರೂ ರಾತ್ರಿ ಶುಭ್ರ ಮನಸ್ಸಿನಿಂದ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ದೇವರ ಕೋಣೆಯಲ್ಲಿ ಜೋಡಿಸಿರುವ ತರಕಾರಿ ನಗ ನಾಣ್ಯಗಳನ್ನು ನೋಡುವದು ಹಬ್ಬದ ವಿಶೇಷತೆಯಾಗಿದೆ. ಕಿರಿಯರು-ಹಿರಿಯರ ಆಶೀರ್ವಾದವನ್ನು ಪಡೆಯುವದರ ಜೊತೆಗೆ ಅವರಿಂದ ಕೈ ನೀಟ ಅಂದರೆ ಕಿರು ಕಾಣಿಕೆಯನ್ನು ಪಡೆಯುವದರ ಮೂಲಕ ಕೇರಳಿಗರು ವರ್ಷದ ಪ್ರಾರಂಭದ ದಿನವನ್ನಾಗಿ ಹೊನ್ನಿನ ಹಬ್ಬವನ್ನಾಗಿ ಆಚರಿಸುತ್ತಾರೆ.