ಸಿದ್ದಾಪುರ, ಏ. 14: ಸಿದ್ದಾಪುರ ಪಟ್ಟಣದಲ್ಲಿ ಕಸದ ಸಮಸ್ಯೆ ಮಿತಿ ಮೀರಿದ್ದು, ಪರಿಸರದೆಲ್ಲೆಡೆ ಕೊಳೆತು ದುರ್ನಾತ ಬೀರುತ್ತಿದೆ. ಬಸ್ ನಿಲ್ದಾಣ, ಅಂಗಡಿ ಮಳಿಗೆ ಸೇರಿದಂತೆ ಎಲ್ಲೆಲ್ಲೂ ಕಸದ ರಾಶಿಗಳೇ ಕಂಗೊಳಿಸುತ್ತಿದೆ. ಪಟ್ಟಣದ ಶುಚಿತ್ವದ ಕಡೆಗೆ ಗಮನ ಹರಿಸಬೇಕಿರುವ ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಸಮಸ್ಯೆ ಬಗೆಹರಿಸದೆ ಮಾಂಸ ಹರಾಜು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಮಸ್ಯೆ ಬೆಟ್ಟದಷ್ಟಿದ್ದರೂ ಆಡಳಿತ ಮಂಡಳಿ ಬಗೆಹರಿಸದೆ ಕಾಲ ಹರಣ ಮಾಡುತ್ತಿರುವದಕ್ಕೆ ಸಿದ್ದಾಪುರ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಕಸ ಸಾಗಿಸಲು ಲಕ್ಷಾಂತರ ರೂ. ಗಳಿಗೆ ಟ್ರ್ಯಾಕ್ಟರ್ ಖರೀದಿ ಮಾಡಿದ್ದರೂ ಅದರ ಸಮರ್ಪಕ ಬಳಕೆ ಮಾಡದೆ, ಕಸ ತುಂಬಿ ರಸ್ತೆ ಬದಿಯಲ್ಲಿಡಲಾಗಿದೆ. ಕಳೆದ ಒಂದು ವಾರದಿಂದ ಕಸ ತುಂಬಿರುವ ಟ್ಯಾಕ್ಟರ್ ಮಡಿಕೇರಿ ರಸ್ತೆಯಲ್ಲಿ ಅನಾಥವಾಗಿ ನಿಂತಿದೆ. ತುಂಬಿರುವ ಕಸ ಕೊಳೆÀತು ನಾರುತ್ತಿದ್ದು, ಹುಳಗಳು ಉತ್ಪತ್ತಿಯಾಗಿ ರಸ್ತೆಗೆ ಬೀಳುತ್ತಿದೆ. ಇದರಿಂದ ಆರೋಗ್ಯ ಹದಗೆಡುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. ಈ ಹಿಂದೆ ಕಸ ವಿಲೇವಾರಿಗೆ ಸಂಬಂಧಪಟ್ಟಂತೆ ಲಕ್ಷಾಂತರ ರೂ. ಗಳ ದುರುಪಯೋಗ ಮಾಡಿರುವದು ಜನರ ಮನಸ್ಸಿನಿಂದ ಮಾಸುವ ಮುನ್ನವೇ ಟ್ರ್ಯಾಕ್ಟರ್ ಕೂಡ ಗುಜರಿ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ವಿಪರ್ಯಾಸವೆಂದರೆ, ಶುಚಿತ್ವದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕಿರುವ ಗ್ರಾಮಾಡಳಿತ ತನ್ನ ಕಚೇರಿ ಆವರಣದಲ್ಲಿಯೇ ಕಸದ ರಾಶಿಗಳನ್ನು ತುಂಬಿಟ್ಟಿರುವದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.