ಕುಶಾಲನಗರ, ಏ. 14 : ಕಳೆದ 4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಏರಿಕೆ ಕಂಡಿದೆ. ಮಾರ್ಚ್ ಅಂತ್ಯದ ವೇಳೆಯಲ್ಲಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತ ಗೊಂಡು ನದಿ ತಟದ ವ್ಯಾಪ್ತಿಯ ಜನತೆ ಆತಂಕಕ್ಕೆ ಒಳಗಾಗುವಂತೆ ಮಾಡಿತ್ತು. ಈಗ ಜಲಾನಯನ ಪ್ರದೇಶಗಳಲ್ಲಿ ಗುಡುಗು, ಮಿಂಚು ಗಾಳಿಯೊಂದಿಗೆ ಸುರಿಯುತ್ತಿರುವ ಮಳೆ ಭೂಮಿಗೆ ತಂಪೆರೆಯುವುದ ರೊಂದಿಗೆ ನೀರಿನ ಬಣ್ಣ ಕೆಸರು ಮಿಶ್ರಿತವಾಗಿ ಹರಿಯತೊಡಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಮಂಗಳವಾರ 12.6 ಮಿಮೀ ಪ್ರಮಾಣದ ಮಳೆ ಸುರಿದಿದೆ ಎಂದು ಮೂಲಗಳು ತಿಳಿಸಿವೆ. ಮಳೆಗಾಗಿ ಕಳೆದ 1 ತಿಂಗಳಿನಿಂದ ಹಲವೆಡೆ ಜಪ ತಪ ಪೂಜೆಗಳಿಗೆ ಮೊರೆ ಹೋಗುವದರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಬಗ್ಗೆ ಸ್ಮರಿಸಬಹುದು.
ಹಾರಂಗಿ ಜಲಾನಯನ ಪ್ರದೇಶದಲ್ಲಿ 10.2 ಮಿಮೀ ಪ್ರಮಾಣದ ಮಳೆಯಾಗಿದ್ದು ಜಲಾಶಯಕ್ಕೆ ಅಲ್ಪ ಪ್ರಮಾಣದ ನೀರಿನ ಒಳಹರಿವು ಪ್ರಾರಂಭ ಗೊಂಡಿದೆ ಎಂದು ಅಣೆಕಟ್ಟು ವಿಭಾಗದ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ. ಪ್ರಸಕ್ತ ಜಲಾಶಯದ ನೀರಿನ ಮಟ್ಟ 2807.13 ಅಡಿಗಳಾಗಿದ್ದು ಜಲಾಶಯ ದಲ್ಲಿ 1.64 ಟಿಎಂಸಿ ಪ್ರಮಾಣದ ನೀರು ಸಂಗ್ರಹವಾಗಿದೆ. ಬುಧವಾರ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಸಂಜೆ ತನಕ ಮೋಡ ಕವಿದ ವಾತಾವರಣ ನಿರ್ಮಾಣ ವಾಗಿತ್ತು. ಎಲ್ಲೆಡೆ ಭೂಮಿ ತಂಪಾಗುವದರೊಂದಿಗೆ ಕೃಷಿ ಚಟುವಟಿಕೆ ಅಲ್ಲಲ್ಲಿ ಪ್ರಾರಂಭ ಗೊಂಡಿರುವದು ಗೋಚರಿಸಿದೆ.