ಗೋಣಿಕೊಪ್ಪಲು, ಏ. 14 : ಕೊಡಗಿನಲ್ಲಿ ಜೀತ ಪದ್ಧತಿ ಇಲ್ಲ ಎಂಬದಕ್ಕೆ ದಿಡ್ಡಳ್ಳಿಯಲ್ಲಿ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಕಾರ್ಮಿಕರೇ ಸಾಕ್ಷಿ ಎಂದು ಬುಡಕಟ್ಟು ಕೃಷಿಕರ ಸಂಘ ಅಧ್ಯಕ್ಷ ಜೆ.ಕೆ. ರಾಮು ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಕೊಡಗಿನಲ್ಲಿ ಜೀತ ಪದ್ದತಿ ಇದೆ ಹೇಳುವ ಮೂಲಕ ಗೊಂದಲಕ್ಕೆ ಎಡೆಯಾಗಿದೆ. ಜೀತದಾಳು ಪದ್ದತಿ ಇದ್ದಿದ್ದರೆ ದಿಡ್ಡಳ್ಳಿಯಲ್ಲಿ ಇಷ್ಟೊಂದು ದಿನ ಹೋರಾಟ ನಡೆಸಲು ಸ್ವಾತಂತ್ರ್ಯ ಸಿಗುತ್ತಿತ್ತೆ. ಇದರಿಂದಾಗಿ ಜೀತ ಪದ್ದತಿ ಇಲ್ಲ ಎಂಬದು ಅರಿವಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಜೀತ ಪದ್ದತಿ ಇಲ್ಲ. ಅಂತ ಸ್ಥಿತಿಯಲ್ಲಿರುವವರು ಹೊರಗೆ ಬಂದು ಹೇಳಿಕೊಳ್ಳಲು ಅವಕಾಶವಿದೆ. ಗೊಂದಲ ಸೃಷ್ಟಿಸುವ ಅವಶ್ಯಕತೆ ಇಲ್ಲ ಎಂದರು. ದಿಡ್ಡಳ್ಳಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ನೈಜ ಆದಿವಾಸಿಗಳ ಸಂಖ್ಯೆ ಕಡಿಮೆ ಇದೆ. ಬಹುತೇಕ ಮಂದಿ ಸ್ಥಳೀಯ ಆದಿವಾಸಿ ಎಂದು ಹೇಳಿಕೊಳ್ಳುವ ಮೂಲಕ ಸವಲತ್ತು ದಕ್ಕಿಸಿಕೊಳ್ಳುವ ಹುನ್ನಾರದಲ್ಲಿದ್ದಾರೆ ಹೊರ ಜಿಲ್ಲೆಗಳಿಂದ ಬಂದವರು ಐಷಾರಾಮಿ ಜೀವನದಲ್ಲಿರುವದು ಮೇಲ್ನೋಟಕ್ಕೆ ಅರಿವಾಗುತ್ತಿದೆ.

ನೈಜ ಆದಿವಾಸಿಗಳು ಜಿಲ್ಲೆಯಲ್ಲಿ ಹಿಂದಿ&divound;ಂದಲೇ ಹೋರಾಟ ನಡೆಸುತ್ತಿದ್ದರೂ ಯಾವದೇ ಸ್ಪಂದನೆ ದೊರೆತಿಲ್ಲ. ಆದರೆ, ಹೊರಗಿನ ಹೋರಾಟಗಾರರ ಬೆಂಬಲದಿಂದ ಸರ್ಕಾರ ಇವರ ಹೋರಾಟಕ್ಕೆ ಸ್ಪಂದಿಸುವ ಮಟ್ಟಕ್ಕೆ ಬಂದಿರುವದು ವಿಪರ್ಯಾಸ ಎಂದರು. ಹೊರಗಿನ ಕಾರ್ಮಿಕರ ಹೋರಾಟ ಆಲಿಸಲು ಮಂತ್ರಿಗಳು ಬರುತ್ತಿರುವದು ಸರಿಯಲ್ಲ. ಹೊರಗಿನಿಂದ ಬಂದವರು ಇಲ್ಲಿನ ಮುಗ್ಧರನ್ನು ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ದಿಡ್ಡಳ್ಳಿ ಹೋರಾಟವನ್ನು ಸ್ಥಳಾಂತರ ಮಾಡಬೇಕು. ಅಲ್ಲಿನ ಶಾಲೆಗಳಿಗೆ ಹೋರಾಟದಿಂದ ಪ್ರತಿಕೂಲ ಪರಿಣಾಮ ಮೂಡುವಂತಾಗಿದೆ ಎಂದರು.

ಸರ್ಕಾರ ಅರಣ್ಯದಲ್ಲಿ ಹಿಂದಿನಿಂದಲೇ ವಾಸಿಸುತ್ತಿರುವ ಆದಿವಾಸಿಗಳಿಗೆ ವೈಯಕ್ತಿಕ ಹಕ್ಕುಪತ್ರ ಹಾಗೂ ಸಮುದಾಯ ಹಕ್ಕುಪತ್ರ ನೀಡಬೇಕು. ಹಕ್ಕುಪತ್ರಗಳನ್ನು ಕಂದಾಯ ಭೂಮಿಗೆ ಪರಿವರ್ತಿಸಬೇಕು. ನಾಗರಹೊಳೆ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಅರಣ್ಯದೊಳಗೆ ಉನ್ನತ ಮಟ್ಟದ ಶಿಕ್ಷಣ ಕೇಂದ್ರ ಹಾಗೂ ವಸತಿ ಕೇಂದ್ರ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಈಡೇರಿಸಬೇಕು ಎಂದರು. ಗೋಷ್ಠಿಯಲ್ಲಿ ತಿತಿಮತಿ ಗ್ರಾ. ಪಂ. ಸದಸ್ಯರುಗಳಾದ ಇಂದಿರಾ, ಶಾಂತಮ್ಮ ಹಾಗೂ ತಿತಿಮತಿ ಗ್ರಾಮ ಅರಣ್ಯ ಹಕ್ಕು ಸಮಿತಿ ಸದಸ್ಯ ರಾಮು ಉಪಸ್ಥಿತರಿದ್ದರು.