ಸಿದ್ದಾಪುರ, ಏ. 14 ಕ್ರೀಡೆ ಮನಸ್ಸಿಗೆ ಮುದ ನೀಡುವ ಮೂಲಕ ದೈಹಿಕ ಸಾಮಥ್ರ್ಯ ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಅರಮೇರಿ ಕಳಂಚೇರಿ ಮಠದ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಮ್ಮತ್ತಿ ಕಾರ್ಮಾಡು ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಅಮ್ಮತ್ತಿ ಸರ್ಕಾರಿ ಶಾಲಾ ಮೈದಾನದಲ್ಲಿ ಏರ್ಪಡಿಸಲಾದ ರಾಜ್ಯ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಕೊಡಗು ಜಿಲ್ಲೆ ಕ್ರೀಡೆಯ ತವರೂರಾಗಿದ್ದು, ಇಲ್ಲಿ ಎಲ್ಲಾ ಕ್ರೀಡೆಗಳು ಆಯೋಜನೆಗೊಳ್ಳುತ್ತಿದ್ದು, ಕ್ರೀಡಾಪಟುಗಳ ನಡುವೆ ಅನ್ಯೋನ್ಯ ಸಂಬಂಧ ಬೆಳೆಯುತ್ತಿದೆ ಡಾ. ಅಂಬೇಡ್ಕರ್ ಅವರ ಜನ್ಮ ದಿನದಂದು ಇಂತಹ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಸಂವಿಧಾನ ಶಿಲ್ಪಿಯ ಹೆಸರು ಸ್ಮರಿಸಿಕೊಳ್ಳಲು ಅನುವು ಮಾಡಿಕೊಟ್ಟ ಆಯೋಜಕರ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕ ಸಂಘದ ಗೌರವಾಧ್ಯಕ್ಷ ಹೆಚ್.ಎನ್ ಅರುಣ್ ವಹಿಸಿದ್ದರು. ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸದಸ್ಯೆ ಶೋಭಾ ಶ್ರೀನಿವಾಸ್, ಮುಕ್ಕಾಟಿರ ಎ. ಸಂತೋಷ್, ಹೆಚ್.ಎಸ್. ರಾಮು, ಹೆಚ್.ಎ. ಜಗದೀಶ್, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಲೀಲಾವತಿ ಮತ್ತು ಇತರರು ಇದ್ದರು. ಈ ಸಂದರ್ಭ ಇತ್ತೀಚೆಗೆ ನಿಧನರಾದ ಸಂಘದ ಸದಸ್ಯರಾದ ಜಗನ್, ಮೋಹಿತ್ ಮತ್ತು ಗೀತಾ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಿದರು. ಪದ್ಮ ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಹೆಚ್.ಎ, ಅಭಿಜಿತ್ ಸ್ವಾಗತಿಸಿದರು. ಲತೀಫ್ ನಿರೂಪಿಸಿ ಪಂದ್ಯಾವಳಿಯ ವೀಕ್ಷಕ ವಿವರಣೆ ಮಾಡಿದರು. ತಾ.16 ರವರೆಗೆ ಪಂದ್ಯಾವಳಿ ನಡೆಯಲಿದೆ.