ಮಡಿಕೇರಿ, ಏ. 14: ಕೃಷಿ ಪ್ರಧಾನವಾದ ಜಿಲ್ಲೆಯಾಗಿರುವ ಕೊಡಗಿನ ಜನರು ಪ್ರಕೃತಿಯ ಆರಾಧಕರು. ಇಲ್ಲಿನ ಹಬ್ಬಹರಿದಿನ ಗಳು ಕೃಷಿ ಚಟುವಟಿಕೆಗೆ ಪೂರಕ ವಾಗಿರುವದು ವಿಶೇಷ. ನಿಸರ್ಗ ಹಾಗೂ ಭೂಮಿತಾಯಿಯನ್ನು ಕೊಡಗಿನ ಜನರು ಅತ್ಯಂತ ಗೌರವದಿಂದ ಕಾಣುತ್ತಾರೆ. ನಾಡಿನ ಜೀವನದಿಯಾಗಿರುವ ಕಾವೇರಿ ಇಲ್ಲಿನ ಮೂಲ ನಿವಾಸಿಗಳ ಕುಲ ದೇವತೆ ಯಾಗಿ ಆರಾಧಿಸಲ್ಪಡು ತ್ತಾಳೆ. ಈ ಹಿಂದಿನ ಕಾಲದಲ್ಲಿ ನಿಗದಿತ ವೇಳಾಪಟ್ಟಿಯಂತೆ ಮಳೆ- ಬೆಳೆ ಕಾಣುತ್ತಿದ್ದ ಕಾವೇರಿ ತವರು ಕಳೆದ ಕೆಲವು ವರ್ಷಗಳಿಂದ ವಾತಾವರಣದ ಏರುಪೇರಿನಿಂದಾಗಿ ತಲ್ಲಣ ಗೊಳ್ಳುತ್ತಿರುವದು ಆತಂಕಕಾರಿ. ವೀರಾಜಪೇಟೆ ತಾಲೂಕು ಕಳೆದ ವರ್ಷವೇ ಬರಪೀಡಿತ ತಾಲೂಕು ಎಂದು ಘೋಷಿಸಲ್ಪಟ್ಟಿದ್ದರೆ, ಈ ವರ್ಷ ಇಡೀ ಕೊಡಗು ಜಿಲ್ಲೆಯೇ ಬರಪೀಡಿತ ಜಿಲ್ಲೆಯಾಗಿ ರಾಜ್ಯ ಸರಕಾರದಿಂದಲೇ ಘೋಷಣೆ ಯಾಗಿದೆ. ಅವಧಿಗೆ ಮುನ್ನವೇ ನದಿ, ತೊರೆ, ಬಾವಿಗಳಲ್ಲಿ ಜೀವ ಜಲಬತ್ತಿ ಹೋಗುತ್ತಿರುವದು ಜಿಲ್ಲೆಯ ನೀರನ್ನು ಅವಲಂಭಿಸಿರುವ ಹೊರಜಿಲ್ಲೆ, ಹೊರ ರಾಜ್ಯದ ಜನತೆಗೂ ಆತಂಕಕಾರಿ ಯಾಗಿದೆ.ಕಳೆದ ಸಾಲಿನಲ್ಲೇ ಮಳೆಯ ಕೊರತೆಯಿಂದಾಗಿ ತತ್ತರಿಸಿದ್ದ ಜನತೆಗೆ ಈ ವರ್ಷವೂ ಇದೇ ಪರಿಸ್ಥಿತಿ ಮುಂದುವರಿಯುತ್ತಿದ್ದುದು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಪ್ರಕೃತಿಯ ಆರಾಧನೆಯ ಫಲವೇನೋ ಎಂಬಂತೆ ಈ ವರ್ಷ ಪ್ರಕೃತಿಮಾತೆ ಸದ್ಯದ ಮಟ್ಟಿಗೆ ಜನರು ನಿಟ್ಟುಸಿರು ಬಿಡುವಂತೆ ಹರಸಿರು ವದು ಕೊಡಗಿನ ಪುಣ್ಯವೇ ಸರಿ. ಸತತ ವರ್ಷಗಳಿಂದ ಮಳೆ ಇಳಿಮುಖವಾದ್ದರಿಂದ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಕಾಫಿ, ಕರಿಮೆಣಸು ಸೇರಿದಂತೆ ಎಲ್ಲಾ ಬೆಳೆಗಳು ಸೂರ್ಯನ ಪ್ರಖರತೆಯಿಂದ ಬಳಲಿ ಬಹುತೇಕ ಗಿಡಗಳು ಬಾಡಿ ಕರಕಲಾಗುವಂತಹ ಪರಿಸ್ಥಿತಿ ಅಲ್ಲಲ್ಲಿ ಕಂಡು ಬಂದಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನವರಿ 27-28ಕ್ಕೆ ಇಡೀ ಜಿಲ್ಲೆಯಾದ್ಯಂತ ಒಂದು ಇಂಚಿನಿಂದ ಐದು ಇಂಚಿನಷ್ಟು ಮಳೆ ಏಕಕಾಲಕ್ಕೆ ಸುರಿದಿದ್ದು, ಸಂಜೀವಿನಿಯಂತಾಗಿದೆ. ಕಾಫಿಗೆ ಈ ಮಳೆ ತುಸು ಮುಂಚಿತ ವಾದರೂ ಭವಿಷ್ಯದ ದೃಷ್ಟಿಯಿಂದ ಈ ಮಳೆ ವರದಾನವಾಗಿದೆ. ಏಕೆಂದರೆ ಈ ಬಾರಿ ಬರಗಾಲದ ಪರಿಸ್ಥಿತಿಯಿಂದಾಗಿ ತೋಟಗಳಿಗೆ ನೀರು ಹಾಯಿಸುವ ಪರಿಸ್ಥಿತಿಯೂ ಇರಲಿಲ್ಲ. ಕೆಲವರಿಗೆ ನೀರು ಹಾಯಿಸಲು ಅವಕಾಶವಿದ್ದರೂ ಮೋಟಾರು ಬಳಸದಂತೆ ನಿರ್ಬಂಧವನ್ನು ಹೇರಲಾಗಿತ್ತು. ಇದಾದ ಬಳಿಕ ಅಗತ್ಯ ‘ಬ್ಯಾಕಿಂಗ್' ಕೂಡ ಲಭಿಸಿರುವದು ನಿಜಕ್ಕೂ ಕೊಡಗಿನ ಜನರ ಪುಣ್ಯವಾಗಿದೆ. ಕೆಲವೆಡೆ ಮಳೆಯ ಪ್ರಮಾಣ ಕಡಿಮೆಯಿದ್ದರೂ ಬಹುತೇಕ ಕಡೆಗಳಲ್ಲಿ ಅಗತ್ಯ ಮಳೆಯಾಗಿದೆ. ಈಗಲೂ ಅಲ್ಲಲ್ಲಿ ಮಳೆ ಬೀಳುತ್ತಿರುವದು ಬಿಸಿಲಬೇಗೆಯಿಂದ ತತ್ತರಿಸುತ್ತಿದ್ದ ಇಳೆಯನ್ನು ತಂಪಾಗಿಸಿದೆ. ಈ ಬಗ್ಗೆ ನಾಡಿನ ಜನರು ಪ್ರಕೃತಿಮಾತೆ ನಾಡಿನ ದೇವರು ದೇವತೆಗಳಿಗೆ ನಮನ ಸಲ್ಲಿಸಲೇಬೇಕು ಎಂದು ಆಸ್ತಿಕ ಬೆಳೆಗಾರರೂ ಸೇರಿದಂತೆ ಹಲವರು ಅಭಿಪ್ರಾಯಪಡುತ್ತಾರೆ.

ಕಳೆದ ಸಾಲಿನಲ್ಲಿ ಜನವರಿ ಯಿಂದ ಈತನಕ ಸುರಿದ ಮಳೆಗೂ ಈ ವರ್ಷ ಬಿದ್ದಿರುವ ಮಳೆಯನ್ನು ಗಮನಿಸಿದರೆ ಸದ್ಯದ ಮಟ್ಟಿಗೆ ಸಮಾಧಾನಪಟ್ಟು ಕೊಳ್ಳಬಹುದು. ಜಿಲ್ಲಾಡಳಿತದ ಮಾಹಿತಿಯಂತೆ ಕಳೆದ ವರ್ಷ ಮಡಿಕೇರಿ ತಾಲೂಕಿಗೆ ಜನವರಿಯಿಂದ ಏಪ್ರಿಲ್ 11ರ ತನಕ 1.36 ಇಂಚು ಮಳೆಯಾಗಿದ್ದರೆ, ಈ ಬಾರಿ 3.72 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿಗೆ ಕಳೆದ ವರ್ಷ ಕೇವಲ 19 ಸೆಂಟ್ ಮಳೆಯಾಗಿದ್ದರೆ ಈ ಬಾರಿ 4.62 ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿಗೆ ಕಳೆದ ವರ್ಷ ಈತನಕ 67 ಸೆಂಟ್ ಮಳೆಯಾಗಿದ್ದು, ಈ ಬಾರಿ 3.04 ಇಂಚು ಮಳೆಯಾಗಿದೆ. ಜಿಲ್ಲಾ ಸರಾಸರಿ ಕಳೆದ ಬಾರಿ ಈ ಅವಧಿ ಯವರೆಗೆ ಕೇವಲ 0.53 ಇಂಚಿನಷ್ಟು ಮಾತ್ರ ಇತ್ತು. ಈ ಬಾರಿ 3.79 ಇಂಚು ಸರಾಸರಿ ಮಳೆಯಾಗಿದೆ.

-ಕಾಯಪಂಡ ಶಶಿ.