ಮಡಿಕೇರಿ, ಏ. 14: ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆ ಕತ್ತಲೆವರೆಗೆ ಕರಿಕೋಟು ಹಾಕಿಕೊಂಡು ಕೈಯ್ಯಲ್ಲೊಂದಿಷ್ಟು ಕಡತಗಳನ್ನು ಹಿಡಿದುಕೊಂಡು ನ್ಯಾಯಾಲಯದೊಳಗಡೆ ಮೇಲೆ-ಕೆಳಗೆ ಓಡಾಡುತ್ತಾ, ದಾಯಾದಿಗಳಂತೆ ಪರ-ವಿರೋಧವಾಗಿ ಕಕ್ಷಿದಾರರ ಪರ ವಾದ ಮಂಡಿಸುತ್ತಾ ಜಂಜಾಟದಲ್ಲಿ ಇರುವ ವಕೀಲರು ಇಂದು ಎಲ್ಲವನ್ನೂ ಮರೆತು ಮಕ್ಕಳಂತೆ ಒಂದಾಗಿ ಮೈದಾನದಲ್ಲಿ ಸಂಭ್ರಮಿಸಿದರು. ಮಡಿಕೇರಿ ಬಾರ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಹರ್ಷೋಲ್ಲಾಸದಲ್ಲಿ ಕಾಲ ಕಳೆದರು.

ವಕೀಲರುಗಳಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್, ಬಾರದ ಗುಂಡು ಎಸೆತ, ಏರ್‍ಗನ್ ಶೂಟಿಂಗ್ ಸ್ಪರ್ಧೆ ಏರ್ಪಡಿಸಲಾಗಿದ್ದು, ಪುರುಷ ಮಹಿಳೆಯರು ಸೇರಿದಂತೆ ವಕೀಲರು ಭಾಗವಹಿಸಿದ್ದರು.

ಈ ಸಂಬಂಧ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೀನಿಯರ್ ಕೌನ್ಸಿಲ್ ಸಿ.ಎಸ್. ಪೂವಯ್ಯ ಭಾಗವಹಿಸಿದ್ದರು. ಬಾರ್ ಅಧ್ಯಕ್ಷ ಸಿ.ವೈ. ಜೋಸೆಫ್, ಕಾರ್ಯದರ್ಶಿ ಪ್ರೀತಂ, ಪದಾಧಿಕಾರಿಗಳಾದ ರತನ್ ತಿಮ್ಮಯ್ಯ, ಕಪಿಲ್ ಕುಮಾರ್, ನಳಿನಿ ಪೊನ್ನಪ್ಪ, ಅರುಣ್ ಕುಮಾರ್, ಸಂಜಯ್ ರಾಜ್, ಪೆಮ್ಮಯ್ಯ, ಶರತ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.