ಸೋಮವಾರಪೇಟೆ,ಏ.14: ಶುಂಠಿ ಬೆಳೆಯಲಾಗಿದ್ದ ಗದ್ದೆಗೆ ಕಾಡಾನೆಗಳ ಹಿಂಡು ಧಾಳಿ ನಡೆಸಿ ಶುಂಠಿ ಪಸಲು ಸೇರಿದಂತೆ ನೀರಿನ ಪೈಪ್ಗಳಿಗೆ ಹಾನಿ ಮಾಡಿರುವ ಘಟನೆ ಸಮೀಪದ ಬೇಳೂರು ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೇಳೂರು ಬಸವನಹಳ್ಳಿ ಗ್ರಾಮದ ಸುಂದರಮೂರ್ತಿ ಎಂಬವರ ಗದ್ದೆಯಲ್ಲಿ ಬೆಳೆಯಲಾಗಿದ್ದ ಶುಂಠಿ ಫಸಲನ್ನು ತುಳಿದು ನಾಶಪಡಿಸಿರುವ ಕಾಡಾನೆಗಳು, ನೀರಿಗೆ ಅಳವಡಿಸಿದ್ದ ಬೋರ್ವೆಲ್ ಪೈಪ್ಗಳನ್ನು ಕಿತ್ತೆಸೆದಿದೆ. ಇದರಿಂದ ಸುಂದರಮೂರ್ತಿ ಅವರಿಗೆ 50 ಸಾವಿರಕ್ಕೂ ಅಧಿಕ ನಷ್ಟವಾಗಿದೆ.
ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳು ಬೀಡುಬಿಟ್ಟಿದ್ದು, ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ. ಕಳೆದ ಬಾರಿ 70 ಸಾವಿರಕ್ಕೂ ಅಧಿಕ ಹಣ ನಷ್ಟವಾಗಿದ್ದು, ಅರಣ್ಯ ಇಲಾಖೆಯಿಂದ ಕೇವಲ 2 ಸಾವಿರ ಪರಿಹಾರ ಬಂದಿದೆ. ಕೃಷಿ ಫಸಲು ನಷ್ಟಕ್ಕೆ ನೀಡುವ ಪರಿಹಾರ ಧನವನ್ನು ಸರ್ಕಾರ ಹೆಚ್ಚಿಸಬೇಕು. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸುಂದರಮೂರ್ತಿ ಒತ್ತಾಯಿಸಿದ್ದಾರೆ.