ಮಡಿಕೇರಿ, ಏ.14: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಆಧುನಿಕ ಭಾರತದ ನಿರ್ಮಾತೃ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಬಣ್ಣಿಸಿದರು. ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ. ಅಂಬೇಡ್ಕರ್ ಇಡೀ ವಿಶ್ವದಲ್ಲಿಯೇ ಮಾದರಿಯಾದ ಸಂವಿಧಾನವನ್ನು ನೀಡಿದ ಮಹಾನ್ ಮಾನವತಾವಾದಿ, ದೇಶದಲ್ಲಿ ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಿದವರು. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಶ್ರಮಿಸಿದರು ಎಂದು ಶಾಸಕರು ಸ್ಮರಿಸಿದರು. ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಷ್ಟ್ರಕ್ಕೆ ನೀಡಿರುವ ಕೊಡುಗೆಗಳನ್ನು ಎಲ್ಲರೂ ಸದಾ ಸ್ಮರಿಸುವಂತಾಗಬೇಕು. ಸಂವಿಧಾನದ ಮೂಲಕ ದೇಶದ ಆಡಳಿತ ವ್ಯವಸ್ಥೆಯ ಎಲ್ಲಾ ರೀತಿಯ ಸೌಲಭ್ಯ ಕಟ್ಟಕಡೆಯ ಪ್ರಜೆಗೂ ತಲುಪಬೇಕು ಎಂಬ ಉದ್ದೇಶವನ್ನರಿತು ಸಂವಿಧಾನ ರಚನೆ ಮಾಡಿದರು. ಶೋಷಿತರಿಗೆ ಸಮಾನ ಅವಕಾಶ ಕಲ್ಪಿಸಲು ಶ್ರಮಿಸಿದರು ಎಂದರು.
ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಅಂಬೇಡ್ಕರ್ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿ ಮೇಲೆ ಬಂದವರು, ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಸಿಗಬೇಕು. ಭ್ರಾತೃತ್ವದಿಂದ ಬದುಕು ನಡೆಸಬೇಕು ಎಂಬದನ್ನು ಸಾರಿದ್ದರು ಎಂದು ವಿವರಿಸಿದರು.
ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಸಿದ್ದರಾಜು ಮಾತನಾಡಿ ರಾಷ್ಟ್ರದ ಜಾತ್ಯತೀತ ಗಣರಾಜ್ಯ ನಿರ್ಮಣಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಶ್ರಮಿಸಿದರು. ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎಂಬದನ್ನು ಪ್ರತಿಪಾದಿಸಿದ್ದರು ಎಂದು ಹೇಳಿದರು.
ಜಿ.ಪಂ. ಸಿಇಒ ಹಾಗೂ ಪ್ರಬಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಬೆಳಕು, ಅವರ ಜನ್ಮ ದಿನಾಚರಣೆಯನ್ನು ದೇಶ ವಿದೇಶಗಳು ಸೇರಿದಂತೆ ವಿಶ್ವ ಸಂಸ್ಥೆಯಲ್ಲಿ ಕೂಡ ಆಚರಿಸುತ್ತಿರುವದು ಎಲ್ಲರಿಗೂ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಉಪ ವಿಭಾಗಾಧಿಕಾರಿ ನಂಜುಂಡೇ ಗೌಡ, ಜಿ.ಪಂ.ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ, ಜಿ.ಪಂ.ಮುಖ್ಯ ಯೋಜನಾಧಿಕಾರಿ ಸತ್ಯನ್, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಪೌರಾಯುಕೆÀ್ತ ಬಿ.ಶುಭಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್.ಗಿರೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ, ತಹಶೀಲ್ದಾರ್ ಕುಸುಮ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್, ಕಾರ್ಮಿಕ ಇಲಾಖೆ ಅಧಿಕಾರಿ ಯತ್ನಟ್ಟಿ ಮತ್ತಿತರರು ಇದ್ದರು.
ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು ಹಾಗೂ ನಗರಸಭೆಯಿಂದ ಮನೆ ದುರಸ್ತಿಗಾಗಿ ಅರ್ಹರಿಗೆ ಚೆಕ್ ವಿತರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಾಯಾದೇವಿ ಗಲಗಲಿ ಸ್ವಾಗತಿಸಿದರು, ಬಿ.ಸಿ.ಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ನಿರೂಪಿಸಿದರು, ವಿದ್ಯಾರ್ಥಿನಿ ಸಿಂಧು ಮತ್ತು ತಂಡದವರು ಪ್ರಾರ್ಥಿಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ಮೆರವಣಿಗೆಗೆ ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಚಾಲನೆ ನೀಡಿದರು. ಮೆರವಣಿಗೆಯೂ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಕಾವೇರಿ ಕಲಾ ಕ್ಷೇತ್ರದವರೆಗೆ ನಡೆಯಿತು. ಕಂಸಾಳೆ ನೃತ್ಯ ಪ್ರದರ್ಶನ ಆಕರ್ಷಣೀಯವಾಗಿತ್ತು.
ಪ್ರಬುದ್ಧ ನೌಕರರ ಒಕ್ಕೂಟದಿಂದ ‘ವಿಶ್ವ ಜ್ಞಾನ ದಿನಾಚರಣೆ’
ಕೊಡಗು ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಪ್ರಯುಕ್ತ ‘ವಿಶ್ವ ಜ್ಞಾನ ದಿನ’ ಕಾರ್ಯಕ್ರಮವು ನಗರದ ಮೈತ್ರಿ ಹಾಲ್ನಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಮಾದರಿ ಸಂವಿಧಾನ ನೀಡಿದ ಮಹಾನ್ ಮನವತಾವಾದಿ ಎಂದು ಹೇಳಿದರು.
ಮೈಸೂರು ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ವಿ.ಷಣ್ಮುಗ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ವಿಸ್ತøತ ಪರಿಕಲ್ಪನೆ ನೀಡಿ ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದರು. ಅವರ ಸಾಮಾಜಿಕ ನ್ಯಾಯ ಚಿಂತನೆಗಳು ಸಂವಿಧಾನದಲ್ಲಿ ಅಡಕವಾಗಿರುವುದರಿಂದ ಸಮಾಜದಲ್ಲಿನ ಶೋಷಿತರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ಜಯಕುಮಾರ್ ಅವರು ಮಾತನಾಡಿ ಅಂಬೇಡ್ಕರ್ ಅವರು ಸಮಾಜದಲ್ಲಿನ ಕಟ್ಟಕಡೆಯ ಜನರ ನೋವು ಮತ್ತು ಶೋಷಣೆಯನ್ನು ಹೋಗಲಾಡಿಸ ಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬದನ್ನು ಸಾರಿದ್ದರು ಎಂದರು. ವೈದ್ಯಾಧಿಕಾರಿ ಡಾ.ದೇವದಾಸ್ ಅವರು ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜ ದಲ್ಲಿರುವ ಕಂದಾಚಾರ, ಅನಿಷ್ಠ ಪದ್ಧತಿಗಳು ಹಾಗೂ ಅಸಮಾನತೆಯನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದರು.
ನ್ಯಾಯಾಧೀಶ ಬಾಬಾ ಸಾಹೇಬ್ ಜಿನರಾಲ್ಕರ್, ನಗರಸಭೆ ಸದಸ್ಯ ನಂದಕುಮಾರ್, ಡಾ.ಸತೀಶ್, ಮತ್ತಿತರರು ಇದ್ದರು. ಸುಮಿತ್ರ ನಿರೂಪಿಸಿದರು, ರಾಮದಾಸ್ ಸ್ವಾಗತಿಸಿದರು, ಸಿದ್ದಯ್ಯ ತಂಡದವರು ಗೀತೆ ಹಾಡಿದರು.