ಮಡಿಕೇರಿ, ಏ. 14: ಕೊಡಗು ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ ವತಿಯಿಂದ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126ನೇ ಜಯಂತಿಯನ್ನು ಇಂದು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಯಿತು.ಈ ಪ್ರಯುಕ್ತ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿರುವ ಅಂಬೇಡ್ಕರ್ ಭವನದಿಂದ ಪೊಲೀಸ್ ಮೈತ್ರಿ ಭವನ ತನಕ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿತ್ತು. ಅಲಂಕೃತ ಅಶ್ವದಳದಿಂದ ಕೂಡಿದ ಮಂಟಪದಲ್ಲಿ ಅಂಬೇಡ್ಕರ್ ಪುತ್ಥಳಿಯ ಮೆರವಣಿಗೆ ವಿಶೇಷ ಮೆರುಗು ನೀಡಿತ್ತು.
ನೂರಾರು ಸಂಖ್ಯೆಯ ಯುವಕರು ದ್ವಿಚಕ್ರ ವಾಹನಗಳಲ್ಲಿ ‘ಜೈ ಭೀಮ್’ ನೀಲಿ ಧ್ವಜದೊಂದಿಗೆ ಮುಂಚೂಣಿಯಲ್ಲಿದ್ದರೆ, ಬ್ಯಾನರ್ ಸಹಿತ ಅಧಿಕ ಸಂಖ್ಯೆಯ ಮಹಿಳೆಯರು, ವಿದ್ಯಾರ್ಥಿ ಸಮೂಹ ಪಾಲ್ಗೊಂಡಿದ್ದರು.
ಅದ್ಧೂರಿ ಮೆರವಣಿಗೆಯಲ್ಲಿ ವಾದ್ಯತಂಡದೊಂದಿಗೆ, ಪಟದ ಕುಣಿತ ಇತ್ಯಾದಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿ, ಮಡಿಕೇರಿಯ ಬೀದಿಗಳಲ್ಲಿ ಒಂದು ಗಂಟೆಗೂ ಅಧಿಕ ಸಮಯ ಸಾಗಿದ ಮೆರವಣಿಗೆ ಶೋಷಿತರ ಧ್ವನಿಯಾಗಿ ಅಂಬೇಡ್ಕರ್ ಅವರ ಸಂದೇಶ ಸಾರುತ್ತಾ ಸಮಾಪನಗೊಂಡಿತು.