ಮಡಿಕೇರಿ, ಏ. 14: ಮುಂದಿನ ನಾಲ್ಕಾರು ವರ್ಷಗಳಲ್ಲಿ ದೇಶದ ಪ್ರತಿಯೊಬ್ಬರಿಗೆ ಸ್ವಂತ ನೆಲೆಯೊಂದಿಗೆ ಮನೆ ಹೊಂದಿರಬೇಕು ಎಂದು ಕೇಂದ್ರ ಸರಕಾರ ಘೋಷಿಸಿದೆ. ರಾಜ್ಯ ಸರಕಾರವು ಈ ನಿಟ್ಟಿನಲ್ಲಿ ವಿಶೇಷ ಕಾಳಜಿಯೊಂದಿಗೆ ಪ್ರತಿಯೊಂದು ಕುಟುಂಬಕ್ಕೆ ವಸತಿ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದೆ.ಆ ಮೂಲಕ ರಾಜ್ಯದೆಲ್ಲೆಡೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ಸರಕಾರ ಆರ್ಥಿಕ ನೆರವು ಒದಗಿಸಿದೆ. ಈ ಯೋಜನೆಯಡಿ ಮನೆಗಳನ್ನು ಕಟ್ಟಿಕೊಳ್ಳುವ ಪ್ರತಿ ಗಿರಿಜನ ಕುಟುಂಬಕ್ಕೆ ರೂ. 2 ಲಕ್ಷ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲಾಗುತ್ತದೆ.

ಒಂದು ಮನೆ ನಿರ್ಮಾಣಕ್ಕೆ ಸರಕಾರದಿಂದ ರೂ. 2 ಲಕ್ಷ ಮಂಜೂರು ಮಾಡಿದೆ. ಸಂಬಂಧಪಟ್ಟ ಫಲಾನುಭವಿ ತಾನು ಸ್ವಂತ ಬ್ಯಾಂಕ್ ಖಾತೆ ಹೊಂದಿರಬೇಕು. ಅಂತಹ ವ್ಯಕ್ತಿಯ ಉಳಿತಾಯ ಖಾತೆಗೆ ನೇರವಾಗಿ ಸರಕಾರವು ವಸತಿ ಯೋಜನೆಯಡಿ ಹಣ ಪಾವತಿಸಲಿದೆ.

ಸರಕಾರವು ನಿಗದಿಪಡಿಸಿದ ನಿವೇಶನ ಅಥವಾ ಗಿರಿಜನರು ನೆಲೆಸಿರುವ ಹಾಡಿಯ ಸ್ವಂತ ಜಾಗದಲ್ಲಿ ತನ್ನ ವಾಸದ ಮನೆಗೆ ಸಂಬಂಧಿಸಿದ ವ್ಯಕ್ತಿ ಅಡಿಪಾಯ ನಿರ್ಮಾಣಗೊಳಿಸಿದ ಸಂದರ್ಭ ಮೊದಲ ಕಂತಿನಲ್ಲಿ ರೂ. 50 ಸಾವಿರ ಮೊತ್ತ ಪಾವತಿಯಾಗಲಿದೆ. ದ್ವಿತೀಯ ಹಂತದಲ್ಲಿ ಮನೆಯ ಗೋಡೆ ನಿರ್ಮಾಣಗೊಂಡ ಬೆನ್ನಲ್ಲೇ ಮತ್ತೆ ರೂ. 50 ಸಾವಿರದ ಎರಡನೆಯ ಕಂತು ಬಿಡುಗಡೆಯಾಗುತ್ತದೆ. ಇನ್ನು ಮೂರನೆಯ ಕಂತು ರೂ. 50 ಸಾವಿರವನ್ನು ಆ ಮನೆಯ ಮೇಲ್ಛಾವಣಿ ಇತ್ಯಾದಿ

(ಮೊದಲ ಪುಟದಿಂದ) ರೂಪುಗೊಂಡ ಹಂತದಲ್ಲಿ ಒದಗಿಸಲಾಗುತ್ತದೆ.

ಈ ರೀತಿ ಫಲಾನುಭವಿ ಕಟ್ಟಿಕೊಳ್ಳುವ ಹೊಸ ಮನೆಯ ಉಳಿದ ಕೆಲಸಗಳು ಸಂಪೂರ್ಣಗೊಳಿಸುವ ಹೊತ್ತಿಗೆ ಕೊನೆಯ ಕಂತು ರೂ. 50 ಸಾವಿರದಂತೆ ಒಟ್ಟು ನಾಲ್ಕು ಕಂತುಗಳಲ್ಲಿ ರೂ. 2 ಲಕ್ಷ ಬಿಡುಗಡೆ ಮಾಡಲಾಗುತ್ತದೆ.

ಆದರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಿಯಮಾನುಸಾರ ಮುಗ್ಧ ಗಿರಿಜನರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸಂಬಂಧಪಟ್ಟವರು ಹಣ ಒದಗಿಸುತ್ತಿಲ್ಲ. ಫಲಾನುಭವಿಗಳಿಗೆ ಮನೆಗಳನ್ನು ಕಟ್ಟಿಕೊಡುವದಾಗಿ ನಂಬಿಸಿ ಗಿರಿಜನರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಪ್ರಾರಂಭಿಸಿ ಮಧ್ಯವರ್ತಿಗಳು ಹಣ ಪಡೆದುಕೊಳ್ಳುತ್ತಿರುವ ಆರೋಪವಿದೆ.

‘ಶಕ್ತಿ’ಗೆ ಲಭಿಸಿದ ಖಚಿತ ಸುಳಿವಿನ ಮೇರೆಗೆ ಗಿರಿಜನ ಹಾಡಿಯೊಂದರಲ್ಲಿ ಖುದ್ದು ಪರಿಶೀಲಿಸಿದಾಗ ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ 20x10 ಅಡಿಗಳ ಸುತ್ತಳತೆಯ ಅಪೂರ್ಣ ಮನೆಗಳನ್ನು ನಿರ್ಮಿಸಿ ಅಮಾಯಕರನ್ನು ಬ್ಯಾಂಕ್‍ಗಳಿಗೆ ಕರೆದೊಯ್ದು ರೂ. 15 ಸಾವಿರದಂತೆ ನಾಲ್ಕು ಕಂತುಗಳಲ್ಲಿ 60 ಸಾವಿರ ಮೊತ್ತ ಡ್ರಾ ಮಾಡುತ್ತಿರುವದಾಗಿ ನಂಬಿಸಿ ಒಟ್ಟು ಮೊತ್ತ ರೂ. 2 ಲಕ್ಷವನ್ನು ಲಪಟಾಯಿಸುತ್ತಿರುವದು ಬೆಳಕಿಗೆ ಬಂದಿದೆ.

ಗಿರಿಜನ ವಸತಿ ಯೋಜನೆಯ ಈ ದುರುಪಯೋಗದಲ್ಲಿ ಸಂಬಂಧಿಸಿದ ಇಲಾಖೆಯ ಕೆಲವರು ಸೇರಿದಂತೆ ಮಧ್ಯವರ್ತಿಗಳು, ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರುವ ಆರೋಪ ಕೇಳಿ ಬರತೊಡಗಿದೆ. ಕಾವೇರಿ ನಾಡಿನಲ್ಲಿ ಅರಣ್ಯ ಅಂಚಿನಲ್ಲಿ ಶತಮಾನಗಳಿಂದ ಬಡತನದ ಬದುಕು ಕಟ್ಟಿಕೊಂಡು ಬಂದಿರುವವರಿಗೆ ಸರಕಾರಗಳ ಯೋಜನೆಯನ್ನು ನೇರವಾಗಿ ತಲಪಿಸುವ ನಿಟ್ಟಿನಲ್ಲಿ ಆಯಾ ಗ್ರಾ.ಪಂ. ವ್ಯಾಪ್ತಿಯ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಮೇಲಧಿ ಕಾರಿಗಳು ಕಾಳಜಿ ತೋರಬೇಕಿದೆ.

ಚಿತ್ರ-ವರದಿ: ಟಿ.ಜಿ.ಎಸ್.