ಮಡಿಕೇರಿ, ಏ. 16: ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಿಡ್ಡಳ್ಳಿ ಸಮಸ್ಯೆ ಕುರಿತು, ಅರಣ್ಯ ಹಾಗೂ ಕಂದಾಯ ಅಧಿಕಾರಿ ಗಳೊಂದಿಗೆ ಜಂಟಿ ಸಭೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುವದು ಎಂದು ನಿನ್ನೆಯಷ್ಟೇ ಘೋಷಿಸಿದ್ದ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಇಂದು ‘ದಿಡ್ಡಳ್ಳಿ’ ಎಂಬ ಹೆಸರು ಕೂಡ ಪ್ರಸ್ತಾಪಿಸದೇ ಸಭೆ ಮುಗಿಸಿ ಬಿಟ್ಟರು !
ಸಭೆಯ ಆರಂಭದಲ್ಲಿ ಕಂದಾಯ ಅಧಿಕಾರಿಗಳಿಂದ ವಿವಿಧ ವಿಷಯಗಳಲ್ಲಿ ಮಾಹಿತಿ ಬಯಸಿದ ಸಚಿವರು, ಕೃಷಿಯಿಂದ ಹೊರತು ಪಡಿಸಿ ಕಾಫಿಯನ್ನು ಉದ್ದಿಮೆಯಾಗಿ ಕಂಡು ಕೊಂಡಿರುವ ತೋಟ ಮಾಲೀಕರು ಹಾಗೂ ಕಾರ್ಮಿಕರ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಆದೇಶಿಸಿದರು.
ಬಡವರನ್ನೇ ಬಂಡವಾಳ ಮಾಡಿಕೊಂಡು ಟಾಟಾರಂತಹವರು ಕೊಡಗಿನಲ್ಲಿ ಸಾವಿರಾರು ಎಕರೆ ಕಾಫಿ ತೋಟದೊಂದಿಗೆ, ಇಲ್ಲಿನ ಕಾರ್ಮಿಕರಿಗೆ ಮನೆ ನಿವೇಶನಕ್ಕೂ ಜಾಗವಿಲ್ಲದಂತೆ ಅತಿಕ್ರಮಿಸಿ ಕೊಂಡಿದ್ದು, ಇಂತಹವರ ಪಟ್ಟಿ ಸಿದ್ಧಗೊಳಿಸಲು ಕಟ್ಟಪ್ಪಣೆ ಮಾಡಿದರು.
ಅಷ್ಟರಲ್ಲಿ ಅಧಿಕಾರಿಯೊಬ್ಬರು ಮಾಜಿ ಸೈನಿಕರೊಬ್ಬರ ಭೂ ಒತ್ತುವರಿ ಬಗ್ಗೆ ಪ್ರಸ್ತಾಪಿಸಿದಾಗ, ಸಿಡಿಮಿಡಿ ಗೊಂಡ ಮೇಲ್ಮನೆ ಸದಸ್ಯೆ ವೀಣಾ, ದೇಶಸೇವೆ ಮಾಡುವವರ ಬಗ್ಗೆ ಮಾತನಾಡುವದು ಬಿಟ್ಟು ದೊಡ್ಡ ದೊಡ್ಡ ಕಂಪನಿ ಹೆಸರು ಹೇಳಿ ಎಂದರು. ಸಭಿಕರ ಸರದಿಯಲ್ಲಿದ್ದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಈ ವೇಳೆ ಅಧಿಕಾರಿಗಳಿಗೆ ಕಂಪನಿಗಳ ಹೆಸರು ಹೇಳಲು ಭಯವೆಂದು ಏರುದನಿಯಲ್ಲಿ ಸಚಿವರ ಗಮನ ಸೆಳೆದರು.
ಹೀಗೆ ಮುಂದುವರಿದ ಚರ್ಚೆ ದಿಡ್ಡಳ್ಳಿ ಹೊರತು ಪಡಿಸಿದಂತೆ, ಅಕ್ರಮ - ಸಕ್ರಮ ಅರ್ಜಿ ವಿಚಾರ, ಚೆರಿಯಪರಂಬು ಮತ್ತು ಪಾಲೇಮಾಡು ಜಾಗ ಒತ್ತುವರಿ ಗೊಂದಲಗಳಿಗೆ ಸೀಮಿತಗೊಂಡಂತೆ ನಡೆದು ಹೋಯಿತು. ಕೆಲವೆಡೆ ದಲಿತರ ಮೇಲಿನ ದೌರ್ಜನ್ಯ ಕುರಿತು ದೂರುಗಳು ಕೇಳಿ ಬಂದಾಗ, ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವರು ಪೊಲೀಸ್ ಇಲಾಖೆಗೆ ಸೂಚಿಸಿದರು. ಸಭೆಗೆ ಮುನ್ನ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿ.ಪಂ. ಅಧ್ಯಕ್ಷ ಹರೀಶ್ ಅವರುಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಹೊತ್ತು ಸಚಿವರೊಂದಿಗೆ ಸಮಾಲೋಚಿಸಿ ಅನ್ಯ ಕಾರ್ಯಕ್ರಮ ನಿಮಿತ್ತ ನಿರ್ಗಮಿಸಿದ್ದು ಕಂಡು ಬಂತು. ಒಂದು ರೀತಿ ಇಂದಿನ ಕಂದಾಯ ಸಚಿವರ ಸಭೆಯು, ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮವಾಗಿ ಮಾರ್ಪಟ್ಟಂತ್ತಿತ್ತು.
- ಶ್ರೀ ಸುತ