ಭಾಗಮಂಡಲ, ಏ. 17: ಸಮೀಪದ ಚೆಟ್ಟಿಮಾನಿ ಕೆದಂಬಾಡಿ ಕ್ರಿಕೆಟ್ ಕ್ಲಬ್ ವತಿಯಿಂದ ನಡೆದ ಗೌಡ ಕುಟುಂಬಗಳ ನಡುವಿನ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ದಂಬೆಕೋಡಿ ತಂಡವು ತಳೂರು ತಂಡದ ವಿರುದ್ಧ ಜಯಗಳಿಸಿ ವಿನ್ನರ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.ಮೊದಲು ಬ್ಯಾಟ್ ಮಾಡಿದ ದಂಬೆಕೋಡಿ ತಂಡವು ಎಂಟು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತು. ಉತ್ತರವಾಗಿ ಆಡಿದ ತಳೂರು ತಂಡವು ಎಲ್ಲಾ ವಿಕೆಟ್ ಕಳೆದುಕೊಂಡು 42 ರನ್ಗಳಿಸಿ ರನ್ನರ್ಸ್ಗೆ ತೃಪ್ತಿಪಟ್ಟಿತು. ಮೂರು ಮತ್ತು ನಾಲ್ಕನೇ ಸ್ಥಾನಗಳಿಗೆ ನಡೆದ ಸೂಪರ್ ಓವರ್ ಪಂದ್ಯದಲ್ಲಿ ಬೇಕಲ್ ತಂಡವು ಮೂರನೇ ಸ್ಥಾನ ಗಳಿಸಿದರೆ ಉಳುವಾರನ ತಂಡವು ನಾಲ್ಕನೇ ಸ್ಥಾನ ಗಳಿಸಿತು. ಸೆಮಿಫೈನಲ್ ಪಂದ್ಯದಲ್ಲಿ ತಳೂರು ಮತ್ತು ಬೇಕಲ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೇಕಲ್ ತಂಡವು 8 ಓವರ್ನಲ್ಲಿ 41 ರನ್ ಗಳಿಸಿತು. ಉತ್ತರವಾಗಿ ಆಡಿದ ತಳೂರು ತಂಡವು 6 ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು. ದಂಬೆಕೋಡಿ ಮತ್ತು ಉಳುವಾರನ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಂಬೆಕೋಡಿ ತಂಡವು 5 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿತು. ಉತ್ತರವಾಗಿ ಆಡಿದ ಉಳುವಾರನ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 34 ರನ್ಗಳ ಸೋಲನ್ನು ಅನುಭವಿಸಿತು. ಫೈನಲ್ ಪಂದ್ಯಾಟವನ್ನು ನಿವೃತ್ತ ಶಿಕ್ಷಕ ಪುಟ್ಟಯ್ಯ ಉದ್ಘಾಟಿಸಿದರು. ನಂತರ ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೆದಂಬಾಡಿ ಜಯಪ್ರಕಾಶ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಜನಾಂಗಗಳ ನಡುವೆ ನಡೆಯುವ ಕ್ರೀಡೆಯಿಂದ ಕ್ರೀಡಾಭಿಮಾನ
(ಮೊದಲ ಪುಟದಿಂದ) ಬೆಳೆಯಲಿದೆ. ನಾವು ಯಾವದೇ ಕಾರ್ಯಕ್ರಮ ಮಾಡಿದರೆ ಅದು ಇನ್ನೊಬ್ಬರಿಗೆ ಅನುಕರಣೆಯಾಗಬೇಕು. ಜೊತೆಗೆ ಸಂಸ್ಕøತಿ ಉಳಿಸುವ ಕೆಲಸ ಆಗಬೇಕಿದೆ. ಇಂತಹ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಹೊರತರುವದರೊಂದಿಗೆ ಉತ್ತಮ ಸಂದೇಶ ಸಾರುವಂತಾಗಬೇಕು. ಕ್ರೀಡೆಯ ಜೊತೆಗೆ ವಿದ್ಯೆಗೆ ಮಹತ್ವ ನೀಡಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ ಕ್ರೀಡೆಯಿಂದ ಜನಾಂಗ ಬಾಂಧವರಲ್ಲಿ ಸಾಮರಸ್ಯ ಮೂಡಲಿದೆ. ಕ್ರೀಡೆ ಪ್ರತಿಯೊಬ್ಬರ ಬದುಕಿನಲ್ಲಿ ಅವಶ್ಯಕ. ಮುಂದಿನ ದಿನಗಳಲ್ಲಿ ಭಾಗಮಂಡಲದಲ್ಲಿ ಅರೆಭಾಷೆ ಅಕಾಡೆಮಿ ವತಿಯಿಂದ ದೊಡ್ಡ ಕಾರ್ಯಕ್ರಮ ನಡೆಸುವ ಚಿಂತನೆ ಇದೆ. ಮುಂದಿನ 25ನೇ ವರ್ಷದ ಕ್ರೀಡಾಕೂಟವು ವಿಜೃಂಭಣೆಯಿಂದ ನಡೆಯಲಿ ಎಂದು ಶುಭ ಹಾರೈಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ ಇಂದಿನ ಯುವಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿಹೋಗು ತ್ತಿದ್ದು ಇದನ್ನು ದೂರವಿಟ್ಟು ಕ್ರೀಡೆಯಲ್ಲಿ ಭಾಗವಹಿಸಿದರೆ ಮನಶ್ಯಾಂತಿ ಸಿಗಲಿದೆ ಎಂದರು. ಪಟ್ಟಡ ಶಿವಕುಮಾರ್ ಮಾತನಾಡಿ ಗೌಡ ಜನಾಂಗಗಳ ನಡುವಿನ ಕ್ರಿಕೆಟ್ ಪಂದ್ಯಾಟದಲ್ಲಿ ಸೋಲು ಗೆಲುವು ಪ್ರಮುಖವಲ್ಲ. ಇದು ಕುಟುಂಬಗಳನ್ನು ಒಗ್ಗೂಡಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾಮೋಹನ್, ಕೆದಂಬಾಡಿ ರಾಜು, ಕುಂದಚೇರಿ ಗ್ರಾಮ ಪಂಚಾಯಿತಿ ಸದಸ್ಯ ಹ್ಯಾರೀಸ್, ಟ್ರೋಫಿ ದಾನಿ ಕೆ.ಬಿ. ಮುತ್ತಣ್ಣ, ಠಾಣಾಧಿಕಾರಿ ಸದಾಶಿವ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಸುನಿಲ್ ಕುಯ್ಯಮುಡಿ