ಗೋಣಿಕೊಪ್ಪಲು, ಏ. 17 : ಹಾಕಿ ಇಂಡಿಯಾ ವತಿಯಿಂದ ಹರಿಯಾಣದಲ್ಲಿ ನಡೆಯುತ್ತಿರುವ ಮಹಿಳೆಯರ ಸೀನಿಯರ್ ಬಿ ಡಿವಿಷನ್ ಹಾಕಿ ಪಂದ್ಯಾಟದಲ್ಲಿ ಹಾಕಿ ಕೂರ್ಗ್ ಮಹಿಳಾ ತಂಡ ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಇಟ್ಟಿದೆ.

ಇಂದು ನಡೆದ ದ್ವಿತೀಯ ಪಂದ್ಯದಲ್ಲಿ ಕೇರಳ ವಿರುದ್ದ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಕಳ್ಳಿಚಂಡ ಟೀನಾ ಬಾರಿಸಿದ ಏಕೈಕ ಗೋಲು ಗೆಲುವು ದಕ್ಕಿಸಿಕೊಳ್ಳುವಂತಾಯಿತು. ಪ್ರಥಮ ಪಂದ್ಯದಲ್ಲಿ ಹಾಕಿ ಮಿಜೊರಾಂ ವಿರುದ್ದ 7-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದ್ದ ತಂಡ ಮತ್ತೊಂದು ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆದಿದೆ.

ನಿರ್ಗಮನ : ಭೂಪಾಲ್‍ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಿರಿಯ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕೂರ್ಗ್ ಬಾಲಕರ ತಂಡ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದೆ. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಹಾಕಿ ಬೆಂಗಳೂರು ವಿರುದ್ದ 4-5 ಗೋಲುಗಳ ಅಂತರದಿಂದ ಸೋಲನುಭವಿಸಿತು.

ಮೊದಲ ಪಂದ್ಯದಲ್ಲಿ ನಾಮ್‍ದಾರಿ ಇಲೆವೆನ್ ವಿರುದ್ದ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 3-2 ಗೋಲುಗಳ ಮೂಲಕ ಜಯ ಸಾಧಿಸಿತು. ಕೂರ್ಗ್ ಪರ ಸೂರ್ಯ 2, ಫಾವದ್ 1 ಗೋಲು ಹೊಡೆದಿದ್ದರು.