ವೀರಾಜಪೇಟೆ, ಏ.17: ಜಿಲ್ಲೆಯ ವಿವಿಧೆಡೆ ಕಾಡಾನೆ ಹಾವಳಿ ಕಾಣಿಸಿಕೊಂಡಿದ್ದು, ಕಾಡಾನೆ ಹಾವಳಿ ತಡೆಗಟ್ಟಲು ಗ್ರಾಮಸ್ಥರು ಸರಕಾರದ ಗಮನ ಸೆಳೆದಿದ್ದಾರೆ.

ಕೆದಮುಳ್ಳೂರು, ತೋರ, ಬಾರಿಕಾಡು ಪೈಸಾರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರಂತರ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು, ಕಾಫಿ ತೋಟಗಳಲ್ಲಿ ಧಾಳಿ ನಡೆಸುತ್ತಿದೆ ಎಂದು ಗ್ರಾಮಸ್ಥರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಖುದ್ದು ದೂರು ನೀಡಿದರು.

ಸಚಿವ ಕಾಗೋಡು ತಿಮ್ಮಪ್ಪ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಪೈಸಾರಿಯಲ್ಲಿ ನಿರಾಶ್ರಿತರಿಗೆ ಮಂಜೂರಾಗಿರುವ ನಿವೇಶನಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ದೂರನ್ನು ನೀಡಿದ್ದಲ್ಲದೆ ಬಾರಿಕಾಡು ಪೈಸಾರಿ ಪಕ್ಕದಲ್ಲಿಯೇ ಸುಮಾರು 12 ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವದಾಗಿಯೂ ಗಮನ ಸೆಳೆದರು.

ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವದೇ ಪ್ರಯೋಜನ ವಾಗಿಲ್ಲ ಎಂದು ತಿಳಿಸಿದರು.

ಸಚಿವರು ವೀರಾಜಪೇಟೆ ಅರಣ್ಯ ವಿಭಾಗಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾಡಾನೆಯನ್ನು ಮರಳಿ ಕಾಡಿಗೆ ಅಟ್ಟಿ ಗ್ರಾಮಸ್ಥರಿಗೆ ಕಾಡಾನೆ ದಾಳಿಯಿಂದ ರಕ್ಷಣೆ ನೀಡುವಂತೆ ಆದೇಶಿಸಿದರು.

ಕಂಬಿಬಾಣೆ

ಸುಂಟಿಕೊಪ್ಪ ಬಳಿಯ ಕಂಬಿಬಾಣೆ ವ್ಯಾಪ್ತಿಯಲ್ಲಿ ಕೃಷಿಕರ ತೋಟಗಳಲ್ಲಿ ಕಾಡಾನೆಗಳು ಅಡ್ಡಾಡುತ್ತಾ, ಅಪಾರ ಫಸಲು ನಾಶಗೊಳಿಸಿವೆ. ತೆಂಗಿನ ಮರ ಹಾಗೂ ಸಣ್ಣ ಹಲಸಿನ ಮರಗಳನ್ನು ಬುಡ ಸಹಿತ ಉರುಳಿಸಿ, ತೆಂಗಿನಗರಿ ಮತ್ತು ಹಲಸು ತಿಂದು ಹೋಗಿರುವ ದೃಶ್ಯ ಕಂಡು ಬಂದಿದೆ.

ಕಂಬಿಬಾಣೆಯ ಕೃಷಿಕರು ‘ಶಕ್ತಿ'ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದು, ನಿರಂತರ ಬೆಳೆದಿರುವ ಫಸಲು ಫಲಗಳೆಲ್ಲ ಕಾಡಾನೆಗಳಿಗೆ ಆಹಾರವಾಗುತ್ತಿದ್ದು, ತಮಗೆ ಕೈಗೆ ಸಿಗುತ್ತಿಲ್ಲವೆಂದು ತಿಳಿಸಿದ್ದಾರೆ.

ಮೇವು ಅರಸುತ್ತಾ ನಿತ್ಯ ತೋಟಗಳ ನಡುವೆ ಸುಳಿದಾಡುವ ಕಾಡಾನೆಗಳನ್ನು ಕಂಡರೆ ದುಃಖ ವಾಗುತ್ತಿದ್ದು, ಸರಕಾರ ಹಾಗೂ ಅರಣ್ಯ ಇಲಾಖೆ ಕಾಡಾನೆಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸದೆ ಬೆಳೆಗಾರರಿಗೆ ನೆಮ್ಮದಿ ಇಲ್ಲವೆಂದು ಪ್ರತಿಕ್ರಿಯಿಸಿದ್ದಾರೆ.

ಕರಿಕೆ

ಕರಿಕೆ ವ್ಯಾಪ್ತಿಯ ಎಳ್ಳುಕೊಚ್ಚಿಯಲ್ಲಿ ಕೂಡ ಕಾಡಾನೆಗಳ ಹಿಂಡು ಕಾಣಿಸಿಕೊಂಡು ರೈತರು ಬೆಳೆದಿರುವ ಅಪಾರ ಕೃಷಿ ಹಾಗೂ ಬಾಳೆ ತೋಟಗಳನ್ನು ಧ್ವಂಸಗೊಳಿಸಿರುವದಾಗಿ ಅಲ್ಲಿನ ನಿವಾಸಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ.

ಕಟ್ಟೆಹಾಡಿ

ಚಿಕ್ಲಿಹೊಳೆ ವ್ಯಾಪ್ತಿಯ ಕಟ್ಟೆಹಾಡಿ ಹಾಗೂ ಸುತ್ತಮುತ್ತ ಕಾಡಾನೆಗಳ ಭಯದಿಂದ ರಾತ್ರಿ ಹೊತ್ತು ಹೊರ ಬರಲು ಭಯವಾಗುತ್ತಿದೆ ಎಂದು ಹಾಡಿ ನಿವಾಸಿಗಳು ‘ಶಕ್ತಿ'ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಕಾಡಾನೆ ಭಯದಿಂದ ಮಕ್ಕಳು, ಕಾರ್ಮಿಕರು ದಿಕ್ಕು ತೋಚದಂತೆ ಗುಡಿಸಲಿನೊಳಗೆ ಕುಳಿತು ಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ನೋವು ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಸೂಕ್ತ ರೀತಿ ಸ್ಪಂದಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಸುಂಟಿಕೊಪ್ಪ

ನೆಟ್ಲ್.ಬಿ. ತೋಟದ ನಿವಾಸಿ ತಿಮ್ಮಪ್ಪ ಪೂಜಾರಿ ಎಂಬವರ ತೋಟಕ್ಕೆ ಕಾಡಾನೆ ಧಾಳಿ ನಡೆಸಿ ಕೃಷಿ ಫಲಸನ್ನು ತಿಂದು ದ್ವಂಸಗೊಳಿಸಿರುವ ಬಗ್ಗೆ ವರದಿಯಾಗಿದೆ.

ಈ ಭಾಗಕ್ಕೆ ಆಹಾರ ಹರಸಿ ಆಗಮಿಸಿದ್ದ ಕಾಡಾನೆಗಳು ಕಾಡಿಗೆ ಹಿಂತೆರಳದೆ ತೋಟದಲ್ಲಿದ್ದ ತೆಂಗು, ಕಾಫಿ, ಬಾಳೆ ಹಾಗೂ ಇನ್ನಿತರ ಕೃಷಿ ಫಸಲನ್ನು ನಿರಂತರವಾಗಿ ತಿಂದು ಧ್ವಂಸಗೊಳಿಸುತ್ತಿರುವದಲ್ಲದೆ ನೀರಿನ ಪೈಪುಗಳನ್ನು ದ್ವಂಸಗೊಳಿಸಿದೆ. ಇದರಿಂದ ಸುಮಾರು ರೂ. 30 ಸಾವಿರಕ್ಕೂ ಮಿಕ್ಕಿ ನಷ್ಟ ಉಂಟಾಗಿರುವ ಬಗ್ಗೆ ಸ್ಥಳೀಯ ಕೃಷಿಕ ತಿಮ್ಮಪ್ಪ ಪೂಜಾರಿ ಅಳಲನ್ನು ತೋಡಿಕೊಂಡಿದ್ದಾರೆ. ಕಾಡಾನೆಗಳು ಕಾಡಿಗೆ ಹಿಂತೆರಳದೆ ತೋಟದಲ್ಲಿಯೇ ವಾಸ್ತವ್ಯ ಹೂಡಿರುವದು ಕಂಡು ಬಂದಿದೆ.