ನಾಪೋಕ್ಲು, ಏ. 17: ಕೈಲ್‍ಪೊಳ್ದ್, ಚಂಗ್ರಾಂದಿ, ಪುತ್ತರಿ ನಮ್ಮೆಯಂತಹ ಸಂಪ್ರದಾಯಬದ್ಧವಾದ ಹಬ್ಬದೊಂದಿಗೆ ಕಳೆದ ಹಲವು ವರ್ಷಗಳಿಂದ ‘ಹಾಕಿ ನಮ್ಮೆ’ ಎಂದೇ ಪ್ರಸಿದ್ದಿ ಪಡೆದಿರುವ ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಹಾಕಿ ಪಂದ್ಯಾಟಕ್ಕೆ ಇದೀಗ 21ನೇಯ ವರ್ಷದ ಸಂಭ್ರಮ. ನಾಪೋಕ್ಲು ಹೋಬಳಿಯಾದ ನಾಲ್‍ನಾಡ್ ಎಂದು ಹೆಸರಿರುವ ಕಾವೇರಿ ತೀರದಲ್ಲಿ ಈ ಬಾರಿಯ ಕೌಟುಂಬಿಕ ಹಾಕಿ ಹಬ್ಬಕ್ಕೆ ಚಾಲನೆ ದೊರೆತಿದ್ದು, ನಾಪೋಕ್ಲುವಿನಲ್ಲಿ ಎರಡನೆಯ ಬಾರಿಗೆ ಹಾಕಿ ಕಲರವ ಆರಂಭಗೊಂಡಿದೆ.

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ಈ ಬಾರಿಯ ಬಿದ್ದಾಟಂಡ ಕಪ್ ಹಾಕಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಇಂದಿನಿಂದ 27 ದಿವಸಗಳ ಕಾಲ ಬಿದ್ದಾಟಂಡ ಕಪ್ ಹಾಕಿ ಪಂದ್ಯಾಟ ಜಿಲ್ಲೆಯ ಕ್ರೀಡಾಭಿಮಾನಿಗಳನ್ನು ನಾಪೋಕ್ಲುವಿನತ್ತ ಆಕರ್ಷಿಸಲಿದೆ.

21 ವರ್ಷಗಳಲ್ಲಿನ ದಾಖಲೆ ಎಂಬಂತೆ ಈ ಬಾರಿಯ ಪಂದ್ಯಾಟದಲ್ಲಿ ಒಟ್ಟು 306 ತಂಡಗಳು ಪಾಲ್ಗೊಂಡಿರುವದು ಮತ್ತೊಂದು ವಿಶೇಷವಾಗಿದೆ. ಈ ಪಂದ್ಯಾವಳಿಯ ಮೂಲಕ 4896 ಆಟಗಾರರು, ಕೋಚ್, ವ್ಯವಸ್ಥಾಪಕರು ಸೇರಿ ಸುಮಾರು 600ಕ್ಕೂ ಅಧಿಕ ಮಂದಿ 50 ತಾಂತ್ರಿಕ ಸಿಬ್ಬಂದಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇಂದು ನಡೆದ ವರ್ಣರಂಚಿತ ಉದ್ಘಾಟನಾ ಸಮಾರಂಭದಲ್ಲಿ ಬೆಳ್ಳಿಯ ಸ್ಟಿಕ್‍ನಿಂದ ಬೆಳ್ಳಿಯ ಬಾಲ್ ಅನ್ನು ತಳ್ಳುವ ಮೂಲಕ ಹಾಕಿ ಉತ್ಸವದ ಜನಕ ಪಾಂಡಂಡ ಎಂ. ಕುಟ್ಟಪ್ಪ ಅವರು ಪಂದ್ಯಾಟವನ್ನು ಉದ್ಘಾಟಿಸಿದರು. ಒಂದೇ ರೀತಿಯ ಸೀರೆ, ವಸ್ತ್ರಧರಿಸಿದ್ದ ಬಿದ್ದಾಟಂಡ ಮಹಿಳೆಯರು, ಕುಪ್ಯಚೇಲೆ, ಕೋವಿ ಹಿಡಿದು ನಿಂತಿದ್ದ ಪರುಷರು ಅತಿಥಿಗಳನ್ನು ಬರಮಾಡಿಕೊಂಡರು. ವಾಲಗ, ತಳಿಯಕ್ಕಿ ಬೊಳಕ್,

(ಮೊದಲ ಪುಟದಿಂದ) ದುಡಿಕೊಟ್ಟ್ ಪಾಟ್ ಸಹಿತವಾಗಿ ಕ್ರೀಡಾಭಿಮಾನಿಗಳನ್ನು ಸ್ವಾಗತಿಸಲಾಯಿತು. ಎಂ.ಇ.ಜಿ. ತಂಡದ ಆರ್ಮಿ ಬ್ಯಾಂಡ್‍ನ ಆಕರ್ಷಣೆಯೂ ಇದರೊಟ್ಟಿಗಿತ್ತು.

ಹಾಕಿ ಹಬ್ಬಕ್ಕೆ ಎಂದೇ ರಚಿಸಲಾಗಿರುವ ‘ಕಳಿನಮ್ಮೆ.., ಕಳಿನಮ್ಮೆ.., ಹಾಕಿ ಕಳಿನಮ್ಮೆ’ ಎಂಬ ಪ್ರಾರ್ಥನಾಗೀತೆ ವಿಶೇಷವಾಗಿತ್ತು. ಇದರೊಂದಿಗೆ ಪೊನ್ನಂಪೇಟೆಯ ನಿನಾದ ಸಂಸ್ಥೆಯ ಚೇಂದಿರ ನಿರ್ಮಲಾ ಬೋಪಣ್ಣ ತಂಡದಿಂದ ‘ಜೈಕೊಡಗ್ ದೇವಿ, ಜಯ ಕ್ರೋಢತಾಯಿ’ ಎಂಬ ಹಾಡಿಗೆ ಸ್ವಾಗತ ನೃತ್ಯ, ಎಂ.ಇ.ಜಿ. ತಂಡದಿಂದ ಬ್ಯಾಂಡ್‍ವಾದನ, 21 ವರ್ಷದ ಉತ್ಸವದ ಅಂಗವಾಗಿ 21 ಗುಂಡು ಹಾರಿಸಿ, ರಂಗು ರಂಗಿನ ಬೆಲೂನ್ ಅನ್ನು ಆಗಸಕ್ಕೆ ಹಾರಿಬಿಡುವದರೊಂದಿಗೆ ಬಿದ್ದಾಟಂಡ ಕಪ್ ಹಾಕಿ ಉತ್ಸವ ಆರಂಭಗೊಂಡಿತು.

ಈ ಸಂದರ್ಭ ಕೊಡವ ಅಕಾಡೆಮಿಯ ಧ್ವಜ ಹಾಗೂ ಬಿದ್ದಾಟಂಡ ಕುಟುಂಬದ ಧ್ವಜಾರೋಹಣವನ್ನು ಅತಿಥಿಗಳು ನೆರವೇರಿಸಿದರು.

ಗಮನ ಸೆಳೆದ ಪ್ರದರ್ಶನ ಪಂದ್ಯ

ಉದ್ಘಾಟನಾ ಸಮಾರಂಭದ ಅಂಗವಾಗಿ ಭಾರತ ಹಾಕಿ ತಂಡದ ಸ್ಟಾರ್ ಆಟಗಾರ ವಿ.ಆರ್. ರಘುನಾಥ್ ನೇತೃತ್ವದ ರೆಸ್ಟ್ ಆಫ್ ಇಂಡಿಯಾ ತಂಡ ಹಾಗೂ 37 ಕೂರ್ಗ್ ರೆಜಿಮೆಂಟ್ ತಂಡದ ನಡುವೆ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡ ಹಾಗೂ ಕರ್ನಾಟಕ ಇಲವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಏರ್ಪಡಿಸಲಾಗಿತ್ತು. ಒಂದು ಪಂದ್ಯದಲ್ಲಿ ಕೂರ್ಗ್ ರೆಜಿಮೆಂಟ್ ತಂಡವನ್ನು 4-0 ಗೋಲಿನಿಂದ ರೆಸ್ಟ್ ಆಫ್ ಇಂಡಿಯಾ ತಂಡ ಏಕಪಕ್ಷೀಯವಾಗಿ ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ತೀವ್ರ ಸೆಣಸಾಟ ಕಂಡು ಬಂದಿತು.

ಈ ಪಂದ್ಯದಲ್ಲಿ ಸಾಕಷ್ಟು ಪ್ರತಿರೋಧ ತೋರಿದ ಕರ್ನಾಟಕ ಇಲವೆನ್‍ನ ಯುವ ಆಟಗಾರರು ರೆಸ್ಟ್ ಆಫ್ ಇಂಡಿಯಾ ತಂಡದ ಬೆವರಿಳಿಸಿದರು. ಅಂತಿಮವಾಗಿ ಈ ಪಂದ್ಯ 3-3 ಗೋಲಿನಿಂದ ಡ್ರಾದಲ್ಲಿ ಕೊನೆಗೊಂಡಿತು. ರೆಸ್ಟ್ ಆಫ್ ಇಂಡಿಯಾ ಪರ ಪರದಂಡ ಅಯ್ಯಪ್ಪ, ಮುಕ್ಕಾಟಿರ ಜಿ. ಪೂಣಚ್ಚ ಹಾಗೂ ವಿ.ಆರ್. ರಘುನಾಥ್ ಗೋಲು ಬಾರಿಸಿದರೆ, ಕರ್ನಾಟಕ ಇಲವೆನ್ ಪರ ಪಿ.ಎ. ಮಾಚಯ್ಯ (2) ಹಾಗೂ ರತನ್ ಮುತ್ತಣ್ಣ ಗೋಲು ಬಾರಿಸಿದರು.

ಪ್ರದರ್ಶನ ಪಂದ್ಯದ ಬಳಿಕ ಅಪರಾಹ್ನ ಅಧಿಕೃತ ಪಂದ್ಯಾಟಗಳು ಆರಂಭಗೊಂಡವು. ಪ್ರದರ್ಶನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತನಿಧಿಸಿರುವ ವಿ.ಎಸ್. ವಿನಯ್, ವಿಕ್ರಂಕಾಂತ್ ಸೇರಿದಂತೆ ಸ್ಟಾರ್ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ತಂಡಗಳ ಪರ ಆಡುತ್ತಿರುವ ಆಟಗಾರರು ಆಡಿದ್ದು, ನೆರೆದಿದ್ದ ಕ್ರೀಡಾಭಿಮಾನಿಗಳಿಗೆ ಮುದ ನೀಡಿತು.

ಆರಂಭಿಕ ದಿನದ ಪಂದ್ಯಾಟ ಮುಗಿದ ಬಳಿಕ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ನಿರ್ದೇಶನದಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕುಡಿಕಾರಂಡ ಭಂಡಾಟ ಎಂಬ ಕೊಡವ ನಾಟಕ ಪ್ರದರ್ಶನ ಹಾಗೂ ಕೊಡವ ಕಲಾವಿದರಿಂದ ಕೊಡವ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಲಾಭಿಮಾನಿಗಳು ಸಂಗೀತಕ್ಕೆ ಹೆಜ್ಜೆ ಹಾಕಿದರು.ರೆಸ್ಟ್ ಆಫ್ ಇಂಡಿಯಾ ಹಾಗೂ ಕೂರ್ಗ್ ರೆಜಿಮೆಂಟ್ ತಂಡದ ನಡುವಿನ ಪ್ರದರ್ಶನ ಪಂದ್ಯದ ಸಂದರ್ಭ ಗೋಲು ಪೆಟ್ಟಿಗೆ ಹಿಂಬದಿ ಕುಳಿತಿದ್ದ ಮಹಿಳೆಯೊಬ್ಬರ ತಲೆಗೆ ಚೆಂಡು ತಾಗಿ ಗಾಯಗೊಂಡ ಘಟನೆ ನಡೆಯಿತು. ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದೆ.