ಸೋಮವಾರಪೇಟೆ, ಏ. 17: ಇಲ್ಲಿನ ಹನಫಿ ಜಾಮಿಯಾ ಮಸೀದಿ ವತಿಯಿಂದ ತಾ. 20ರಂದು ಹಜರತ್ ಮಸ್ತಾನ್ ಮಲಂಗ್ ಷಾವಲಿ ದರ್ಗಾದ ಉರೂಸ್ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಮಸೀದಿ ಅಧ್ಯಕ್ಷ ಎಂ.ವೈ ಮುಕ್ರಂ ಬೇಗ್ ಬಾಬು ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಹಜರತ್ ಮಸ್ತಾನ್ ಮಲಂಗ್ ಷಾವಲಿಯವರ ದರ್ಗಾದ ಉರೂಸ್ ಮಹೋತ್ಸವ ನಡೆಯಲಿದ್ದು, ತಾ. 20ರಂದು ಸಂಜೆ 7 ಗಂಟೆಗೆ ಹನಫಿ ಜಾಮಿಯಾ ಮಸೀದಿ ಆವರಣದಲ್ಲಿ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದೆ ಎಂದರು.

ನಂತರ ಗಂಧ ಮಹೋತ್ಸವ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಕ್ಫ್ ಬೋರ್ಡ್‍ನ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್ ವಹಿಸಲಿದ್ದಾರೆ. ಮಧ್ಯಪ್ರದೇಶದ ಖಾರಿಲಿಯಕತ್ ರಜಾನೂರಿ ಸಾಹೇಬ್, ಮೈಸೂರಿನ ನವೀದ್ ಅತ್ತರಿ ದಾವತ್, ಜಿಲ್ಲಾ ವಕ್ಫಬೋರ್ಡಿನ ಕಾರ್ಯದರ್ಶಿ ಸಾದತ್ ಹುಸೇನ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹನಫಿ ಜಾಮಿಯಾ ಮಸೀದಿ ವತಿಯಿಂದ ರಾತ್ರಿ 9.30ಕ್ಕೆ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಯಾಸ್ಮೀನ್ ಪಾಶಾ, ಪದಾಧಿಕಾರಿಗಳಾದ ಮಹಮ್ಮದ್ ರಫಿ, ರಹಿಂ ಚಾಂದ್, ಶಫಿ ಬೇಗ್, ಮೊಹಮ್ಮದ್ ಇಲಿಯಾಸ್ ಉಪಸ್ಥಿತರಿದ್ದರು.