ನಾಪೆÇೀಕ್ಲು, ಏ. 17: ಸಮೀಪದ ಮೂಟೇರಿ ಉಮಾಮಹೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ಸಂಭ್ರಮದಿಂದ ಜರುಗಿತು. ಉತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ನೈರ್ಮಲ್ಯ ಬಲಿಯೊಂದಿಗೆ ವಿವಿಧ ಪೂಜಾ ವಿಧಿವಿಧಾನಗಳು ಆರಂಭಗೊಂಡವು. ಬಳಿಕ ಗ್ರಾಮಸ್ಥರಿಂದ ಸಾಂಪ್ರದಾಯಿಕ ಎತ್ತುಪೋರಾಟ ನಡೆಯಿತು. ಉತ್ಸವದಲ್ಲಿ ಸುತ್ತಮುತ್ತಲ ಗ್ರಾಮಗಳ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ದುಡಿಕೊಟ್ಟ್ ಪಾಟ್ ನುಡಿಸಲಾಯಿತು. ಬಳಿಕ ಮಹಾಪೂಜೆ ಜರುಗಿತು. ನಂತರ ನಡೆದ ನೃತ್ಯ ಬಲಿಯನ್ನು ಭಕ್ತರು ವೀಕ್ಷಿಸಿದರು. ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಸಂಜೆ ತೆಂಗಿನಕಾಯಿಗೆ ಗುಂಡು ಹೊಡೆಯುವದರ ಮೂಲಕ ಹಬ್ಬದ ಕಟ್ಟನ್ನು ಸಡಿಲಿಸಲಾಯಿತು. ದೇವರ ಅವಭೃತ ಸ್ನಾನದೊಂದಿಗೆ ಉತ್ಸವ ಸಂಪನ್ನಗೊಂಡಿತು. ದೈವಿಕ ವಿಧಿವಿಧಾನಗಳನ್ನು ಪ್ರಧಾನ ಅರ್ಚಕ ರವಿ ಉಡುಪ ನೆರವೇರಿಸಿದರು. ತಂತ್ರಿಗಳಾಗಿ ಅಮ್ಮತ್ತಿಯ ಶಂಕರಭಟ್ ಕಾರ್ಯನಿರ್ವಹಿಸಿದರು.
ಮೂಟೇರಿ ಉಮಾಮಹೇಶ್ವರಿ ದೇವಾಲಯದಲ್ಲಿ ಪ್ರತಿ ವರ್ಷ ಸೌರಮಾನ ಯುಗಾದಿಯಂದು ದೇವರ ವಾರ್ಷಿಕೋತ್ಸವ ನಡೆಯುವದು ವಿಶೇಷವಾಗಿದೆ.