ಸೋಮವಾರಪೇಟೆ, ಏ.17: ಗ್ರಾಮೀಣ ಭಾಗದ ಜನಪದದ ಆಚರಣೆಗಳಲ್ಲಿ ಪ್ರಮುಖವಾದ ಸಾಂಪ್ರದಾಯಿಕ ಸುಗ್ಗಿ ಉತ್ಸವಗಳು ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟಶ್ರೇಣಿ ಗ್ರಾಮಗಳಲ್ಲಿ ನಡೆಯುತ್ತಿವೆ. ಸಮೀಪದ ನಗರಳ್ಳಿ ಗ್ರಾಮದಲ್ಲಿ ಇಂದು ನಡೆದ ಕೂತಿನಾಡು ಸುಗ್ಗಿ ಉತ್ಸವವೂ ಸಹ ಸಾಂಪ್ರದಾಯಿಕ ಸೊಡಗನ್ನು ಸಾಕ್ಷೀಕರಿಸಿತು.
ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗ್ರಾಮದೇವತೆ ಸಬ್ಬಮ್ಮ ದೇವಿಗೆ 15ದಿನಗಳ ಕಾಲ ವಿಶೇಷ ಪೂಜೆಗಳನ್ನು ಸಲ್ಲಿಸಿ, ಗ್ರಾಮ ಸುಭಿಕ್ಷೆಗೆ ಬೇಡಿಕೆ ಹಾಗೂ ಮಳೆ, ಬೆಳೆ ಸಮೃದ್ಧಿಗಾಗಿ ಪ್ರಾರ್ಥನೆ ಮಾಡುವದೇ ಸುಗ್ಗಿ ಉತ್ಸವದ ವಿಶೇಷ.
ಸುಮಾರು 400 ವರ್ಷಗಳ ಇತಿಹಾಸವಿರುವ ಸುಗ್ಗಿ ಉತ್ಸವವನ್ನು ಈಗಲೂ ಕ್ರಮಬದ್ದವಾಗಿ ಆಚರಿಸಿಕೊಂಡು ಬರುತ್ತಿರುವದು ವಿಶೇಷವಾಗಿದೆ. ಗ್ರಾಮದ ನಿವಾಸಿಗಳು, ಮಹಿಳೆಯರು, ಮಕ್ಕಳು, ಹಿರಿಯರು ಉತ್ಸವದಲ್ಲಿ ಭಾಗವಹಿಸಿ ಗ್ರಾಮದೇವತೆಗೆ ಇಷ್ಟಾರ್ಥಗಳ ನೆರವೇರಿಕೆಗೆ ಪ್ರಾರ್ಥಿಸಿದರು. ಅದರಲ್ಲೂ ಕುಟುಂಬ ಸಮೇತ ತವರಿನ ಸುಗ್ಗಿಯಲ್ಲಿ ಭಾಗವಹಿಸುವದು, ಗ್ರಾಮದ ಹೆಣ್ಣುಮಕ್ಕಳಿಗೆ ವಿಶೇಷ ದಿನವೂ ಹೌದು.
ಸುಗ್ಗಿ ಉತ್ಸವದ ಕೊನೆ ದಿನವಾದ ಸೋಮವಾರ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸುಗ್ಗಿ ಉತ್ಸವಕ್ಕೆ ತೆರೆ ಬಿದ್ದಿತು.
ಸೋಮವಾರ ಬೆಳಿಗ್ಗೆ ಸುಗ್ಗಿಬನದ ಸಮೀಪವಿರುವ ಬಿಲ್ಲ ರಂಗದಲ್ಲಿ ಪೂರ್ವಜರ ಜೀವನ ಪದ್ದತಿಯನ್ನು ಬಿಂಬಿಸುವ ನೃತ್ಯ ಪ್ರಾಕಾರವನ್ನು ಗ್ರಾಮಸ್ಥರು ಅಭಿನಯಿಸಿ, ನೆರದಿದ್ದವರನ್ನು ರಂಜಿಸಿದರು. ಅದರಲ್ಲೂ ಕಡವೆ ಬೇಟೆಯಾಡುವ ಅಭಿನಯ ನೆರೆದಿದ್ದವರನ್ನು ನಗೆಗಡಲ್ಲಿ ತೆಲುವಂತೆ ಮಾಡಿತು.
ಕಡವೆಯ ಪಾತ್ರದಾರಿಯನ್ನು ಅಟ್ಟಿಸಿಕೊಂಡು ಹೋಗುವ ಬೇಟೆಗಾರರ ತಂಡದ ಸದಸ್ಯರಿಗೆ ಕಡವೆ ಒದೆಯುವ ದೃಶ್ಯ ಮನಮೋಹಕವಾಗಿತ್ತು. ಒದೆ ತಿಂದವರ ನೆಲಕ್ಕುರುಳಿದ ಘಟನೆಯೂ ನಡೆಯಿತು. ಕೊನೆಯಲ್ಲಿ ಕಡವೆ ಕಾಡು ಸೇರುವ ಮೂಲಕ, ಬೇಟೆಗಾರರಿಂದ ಬಚಾವಾಯಿತು.
ಸಾಂಪ್ರಾದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ಗ್ರಾಮದ ಹಿರಿಯರು, ಬಿಲ್ಲರಂಗದಲ್ಲಿ ಪ್ರದರ್ಶನ ಹಾಕುತ್ತ, ಮಲೆನಾಡು ಸುಗ್ಗಿ ಇತಿಹಾಸವನ್ನು ನೆರದಿದ್ದವರಿಗೆ ಮನವರಿಕೆ ಮಾಡಿದರು.
ಸುಗ್ಗಿ ಕುಣಿತ, ಸುಗ್ಗಿಹಾಡುವದು, ಬಿಲ್ಲು ತೂಗುವದು ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನಡೆದವು. 18 ಗ್ರಾಮಗಳ ನವ ದಂಪತಿಗಳು ಮದುವೆ ಕಾಣಿಕೆಯನ್ನು ಸಲ್ಲಿಸಿದರು. ಹರಕೆ ತೀರಿಸುವದು ಮತ್ತು ಹರಕೆ ಮಾಡಿಕೊಳ್ಳುವ ಕಾರ್ಯಗಳು ನಡೆದವು. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪೂಜೆ ನೆರವೇರಿಸಿದರು.
ಸುಗ್ಗಿ ಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ಭಕ್ತಾದಿಗಳಿಗೆ ಅನ್ನಸಂರ್ಪಣೆ ನಡೆಯಿತು. ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಟಿ.ಜೋಯಪ್ಪ, ಉಪಾಧ್ಯಕ್ಷ ಎನ್.ಕೆ.ಪ್ರಕಾಶ್, ಕಾರ್ಯದರ್ಶಿ ಎನ್.ಬಿ.ಧರ್ಮಪ್ಪ, ಖಜಾಂಚಿ ಎಲ್.ಪಿ.ಈರಪ್ಪ, ಪ್ರಮುಖರಾದ ಹೆಚ್.ಪಿ.ಗೋಪಾಲ ಸುಗ್ಗಿಯ ಉಸ್ತುವಾರಿ ವಹಿಸಿದ್ದರು.