ಮಡಿಕೇರಿ, ಏ. 17: ದಿಡ್ಡಳ್ಳಿ ನಿರಾಶ್ರಿತರಿಗೆ ಕೃಷಿ ಭೂಮಿ ಸಹಿತ ನಿವೇಶನ ಹಾಗೂ ವಸತಿ ವ್ಯವಸ್ಥೆ ಕಲ್ಪಿಸುವದಾಗಿ ಭರವಸೆ ನೀಡಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಮ್ಮ ಹೇಳಿಕೆಯನ್ನು ದಿಢೀರ್ ಬದಲಾಯಿಸಿದ್ದು, ಇದಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರಣವೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆರೋಪಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಡಿ.ಎಸ್. ನಿರ್ವಾಣಪ್ಪ, ದಲಿತರು, ದುರ್ಬಲರು, ಬಡವರು, ಅಲ್ಪಸಂಖ್ಯಾತರ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ಸಮುದಾಯದ ಋಣ ತೀರಿಸುವ ಕೆಲಸವನ್ನು ಮಾಡಬೇಕಾಗಿತ್ತು, ಆದರೆ ದ್ರೋಹ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾಂಗ್ರೆಸ್ಸಿಗರು ಕಂದಾಯ ಸಚಿವರ ದಿಕ್ಕು ತಪ್ಪಿಸಿರುವದು ಸ್ಪಷ್ಟವಾಗಿದ್ದು, ತಾ. 15 ರಂದು ನೀಡಿದ್ದ ವೀರಾವೇಶದ ಭರವಸೆಯನ್ನು ಸಚಿವರು ಉಳಿಸಿಕೊಳ್ಳಲಿ ಎಂದು ಒತ್ತಾಯಿಸಿದರು.

(ಮೊದಲ ಪುಟದಿಂದ) ತಾ. 19 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಭೂಮಿಯ ಹಕ್ಕು ಸಿಗದಿದ್ದಲ್ಲಿ ಹೋರಾಟದ ದಿಕ್ಕು ಬದಲಾಗಲಿದೆ ಎಂದು ನಿರ್ವಾಣಪ್ಪ ಎಚ್ಚರಿಕೆ ನೀಡಿದರು.

ದಿಡ್ಡಳ್ಳಿಗೆ ಭೇಟಿ ನೀಡಿದ್ದ ಸಚಿವರು ನಿರಾಶ್ರಿತರಲ್ಲಿ ವಿಶ್ವಾಸ ತುಂಬುವ ಭರವಸೆಗಳನ್ನು ನೀಡಿದ್ದರು. ದಿಡ್ಡಳ್ಳಿ ಪ್ರದೇಶ ಕಂದಾಯ ಭೂಮಿಯಾಗಿದ್ದರೆ ತಲಾ ಎರಡು ಎಕರೆ, ಅರಣ್ಯ ಭೂಮಿಯಾಗಿದ್ದರೆ ಅರಣ್ಯ ಹಕ್ಕು ಕಾಯ್ದೆಯಡಿ 3 ರಿಂದ 5 ಎಕರೆ ಭೂಮಿ ನೀಡುವದಾಗಿ ತಿಳಿಸಿದ್ದರು. ಆದರೆ ತಾ. 16 ರಂದು ಬಸವನಹಳ್ಳಿ, ಬ್ಯಾಡಗೊಟ್ಟ, ಕೆದಮುಳ್ಳೂರಿಗೆ ಭೇಟಿ ನೀಡಿ ಪುನರ್‍ವಸತಿ ಪ್ರದೇಶವನ್ನು ವೀಕ್ಷಿಸಿದ ನಂತರ ನಿರಾಶ್ರಿತರನ್ನು ಮೂರ್ಖರೆಂದು ಕರೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾಗವನ್ನು ಪರಿಶೀಲಿಸುವ ಸಂದರ್ಭ ಜೊತೆಗಿದ್ದ ಜಿಲ್ಲೆಯ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಸಚಿವರ ಮನೋ ಭಾವನೆಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಸಣ್ಣದೊಂದು ನಿವೇಶನ ನೀಡಿ ಅಲ್ಲಿಗೆ ತೆರಳಿ ಎಂದು ಸೂಚಿಸಿದರೆ ಆದಿವಾಸಿಗಳು ಬದುಕು ಸಾಗಿಸುವದಾ ದರು ಹೇಗೆ ಎಂದು ಪ್ರಶ್ನಿಸಿದ ನಿರ್ವಾಣಪ್ಪ, ಕೃಷಿ ಕಾರ್ಯಕ್ಕೆ ಭೂಮಿ ನೀಡಲೇಬೇಕೆಂದು ಒತ್ತಾಯಿಸಿದರು.

ಸಮಿತಿಯ ಪ್ರಮುಖ ಅಮಿನ್ ಮೊಹಿಸಿನ್ ಮಾತನಾಡಿ, ಸಚಿವರ ಭರವಸೆ ಸರಕಾರದ ಆದೇಶವಿದ್ದಂತೆ, ಆದ್ದರಿಂದ ತಾ. 15 ರಂದು ನೀಡಿದ ಭರವಸೆಯಂತೆಯೇ ಭೂಮಿಯ ಹಂಚಿಕೆಯಾಗಬೇಕೆಂದು ಒತ್ತಾಯಿಸಿದರು. ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಚಿವರು ಹೇಳಿಕೆಯನ್ನು ನೀಡುತ್ತಿದ್ದು, ಇದು ಹಲವು ಸಂಶಯಗಳನ್ನು ಹುಟ್ಟು ಹಾಕುತ್ತಿದೆ. ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ತಿಳಿಸಿದ ಅವರು ಆದಿವಾಸಿಗಳಿಗೆ ಯಾರೂ ಪ್ರಚೋದನೆಯನ್ನು ನೀಡುತ್ತಿಲ್ಲವೆಂದು ಸ್ಪಷ್ಟಪಡಿಸಿದರು.

ಬಹುಜನ ಕಾರ್ಮಿಕರ ಸಂಘದ ಅಧ್ಯಕ್ಷÀ ಕೆ. ಮೊಣ್ಣಪ್ಪ ಮಾತನಾಡಿ, ಪಾಲೇಮಾಡಿನ ಸ್ಮಶಾನದ ಜಾಗವನ್ನು ಯಾವದೇ ಕಾರಣಕ್ಕೂ ಬಿಟ್ಟು ಕೊಡುವದಿಲ್ಲವೆಂದರು. ಕ್ರಿಕೆಟ್ ಕ್ರೀಡಾಂಗಣಕ್ಕೆ ಬೇರೆ ಪ್ರದೇಶದಲ್ಲಿ ಜಾಗ ಗುರುತಿಸಲಿ ಎಂದು ಒತ್ತಾಯಿಸಿದ ಅವರು ನಿರಾಶ್ರಿತ ಭೂಮಿಯ ಹಕ್ಕಿನ ಹೋರಾಟಗಳಿಗೆ ಅಡೆತಡೆ ಎದುರಾಗಲು ಜಾತಿವಾದ ಕಾರಣವೆಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಎಸ್.ಆರ್. ಮಂಜುನಾಥ್, ಕಿರಣ್ ಹಾಗೂ ಪ್ರೇಮ್‍ಕುಮಾರ್ ಉಪಸ್ಥಿತರಿದ್ದರು.