ಶ್ರೀಮಂಗಲ, ಏ. 17: ಇಲ್ಲಿನ ವಗರೆ ಶ್ರೀ ಈಶ್ವರ ಅಯ್ಯಪ್ಪ ದೇವನೆಲೆಯ ಪೌರಾಣಿಕ ಹಿನ್ನಲೆಯನ್ನು ತಿಳಿಸುವ ಉದ್ದೇಶದಿಂದ ‘ದೇವಪುರಾಣ ಹಾಗೂ ಭಕ್ತಿಗೀತೆಗಳು’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ ಎಂದು ದೇವಸ್ಥಾನದ ತಕ್ಕಮುಖ್ಯಸ್ಥ ಕಟ್ಟೇರ ಅಚ್ಚಪ್ಪ ತಿಳಿಸಿದರು.
ಉಳುವಂಗಡ ಕಾವೇರಿ ಉದಯ ಬರೆದ ಈ ಪುಸ್ತಕದಲ್ಲಿ ದೇವನೆಲೆಯ ಸಮಗ್ರ ಮಾಹಿತಿಯೊಂದಿಗೆ ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ ರಚಿಸಿರುವ ಭಕ್ತಿಗೀತೆಗಳಿದ್ದು, ಈ ಪುಸ್ತಕವನ್ನು ಓದಿ ಲೇಖಕರಿಗೆ ಪ್ರೋತ್ಸಾಹ ನೀಡಬೇಕು ಎಂದರು.
‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ’ ಕಾರ್ಯದರ್ಶಿ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಸಾಹಿತ್ಯ ರಚನೆ ಒಂದು ತಪಸ್ಸು. ಅದಕ್ಕೆ ಸಂಪೂರ್ಣ ಶ್ರದ್ಧೆ, ತಾಳ್ಮೆ, ವಿಚಾರಗಳ ಅರಿವು, ಮಾಹಿತಿ ಸಂಗ್ರಹಿಸುವ ಕಲೆ ಹಾಗೂ ಉತ್ತಮ ಶೈಲಿಯ ಬರವಣಿಗೆ ಇರಬೇಕು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ವಗರೆ ಈಶ್ವರ ಅಯ್ಯಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ಮಾತನಾಡಿ, ದೇವಸ್ಥಾನ ಹಾಗೂ ಪುಸ್ತಕದ ಸ್ಥೂಲ ಪರಿಚಯ ಮಾಡಿದರು. ಉಳುವಂಗಡ ಕಾವೇರಿ ಉದಯ ಹಾಗೂ ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ ಸಾಹಿತ್ಯ ಸೃಷ್ಟಿಸುವ ಸಂಧರ್ಭ ತಮಗಾದ ಅನುಭವಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಹಿರಿಯರಾದ ಕಟ್ಟೇರ ದಾದು, ಚೆಟ್ಟಂಡ್ರ ಸೋಮಯ್ಯ, ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಚೆಟ್ಟಂಡ್ರ ಗಣೇಶ್, ಉಳುವಂಗಡ ದಿನೇಶ್, ಅರ್ಚಕ ವಸಂತ ಸ್ವಾಮಿ, ಕಟ್ಟೇರ ಭೀಮಯ್ಯ, ಚೊಟ್ಟೆಯಾಂಡಮಾಡ ಸೋಮಯ್ಯ, ಉಳುವಂಗಡ ಸುಬ್ಬಯ್ಯ, ಉಳುವಂಗಡ ಕೃಷ್ಣ ಉಪಸ್ಥಿತರಿದ್ದರು.