ಮಡಿಕೇರಿ, ಏ. 19: ಪತ್ರಿಕೋದ್ಯಮದ ಸವಾಲುಗಳನ್ನು, ಸಾಮಾಜಿಕ ಹೋರಾಟಗಳಲ್ಲಿ ಪತ್ರಿಕೆಗಳ ಪಾತ್ರವೇನು , ರಾಜಕೀಯ ಬೆಳವಣಿಗೆಗಳ ವಿಶ್ಲೇಷಣೆ ಮತ್ತು ಅದು ಒಡ್ಡುವ ಸವಾಲುಗಳು ಇತ್ಯಾದಿ ಬಗ್ಗೆ ‘ಪ್ರಜಾಸತ್ಯ’ ದಿನಪತ್ರಿಕೆಯ ಆಶ್ರಯದಲ್ಲಿ ಮಡಿಕೇರಿಯ ವ್ಯಾಲಿವ್ಯೂ ಹೋಟೆಲ್ ಸಭಾಂಗಣದಲ್ಲಿ ನಡೆದ ಮಾಧ್ಯಮ ಕಾರ್ಯಾಗಾರದಲ್ಲಿ ಹತ್ತು ಹಲವು ಅಭಿಪ್ರಾಯಗಳು,ವಿಚಾರ ಮಂಡನೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಹೆತ್ತ ತಾಯಿಯ ಹೆರಿಗೆಯ ನೋವಿನ ಅನುಭವ ನೀಡುವ ಈ ಪತ್ರಿಕೋದ್ಯಮವು ಪ್ರತಿದಿನ ಹೊಸ ಹೊಸ ಅನುಭವಗಳತ್ತ ಕೊಂಡೊಯ್ಯುತ್ತದೆ ಎಂದರು.

ಸಮಾಜಮುಖಿ ಕೆಲಸ

ಇಂದಿನ ಪತ್ರಿಕೋದ್ಯಮದ ಸವಾಲಿನ ಕುರಿತು ಮಾತನಾಡಿದ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಸಮಾಜಮುಖಿ ಕೆಲಸ ಮಾಡುವಾಗ ಹಲವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ಪತ್ರಕರ್ತರಿಗಾಗಿ ವಿಶೇಷ ಕಾನೂನಿನ ಅವಶ್ಯಕತೆಯಿದೆ. ಮಾಧ್ಯಮಗಳು ಸಮಸ್ಯೆಗಳನ್ನು ಕಂಡಲ್ಲಿ ಅದರ ಬಗ್ಗೆ ಸಂಪೂರ್ಣವಾಗಿ ಅರಿತು ಸುದ್ದಿಯನ್ನು

(ಮೊದಲ ಪುಟದಿಂದ) ಬಿತ್ತರಿಸಿದಲ್ಲಿ ಮಾತ್ರ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದರು.

ಸಮಾಜದಲ್ಲಿ ಬದಲಾವಣೆ

ಸಾಮಾಜಿಕ ಹೋರಾಟಗಳು ಮತ್ತು ಪತ್ರಿಕೆಗಳು ಕುರಿತು ಮಾತನಾಡಿದ ಕಾವೇರಿ ಟೈಮ್ಸ್ ಸಂಪಾದಕ ಬಿ.ಸಿ. ನಂಜಪ್ಪ ಅವರು ಕಾವೇರಿಯನ್ನು ಉಳಿಸುವ ಯೋಚನೆ ಯಾರಲ್ಲಿಯೂ ಇಲ್ಲ. ಆದರೆ ಕಾವೇರಿಯಿಂದ ಎಲ್ಲವೂ ಬೇಕು ಎಂದು ನುಡಿದರು. ಅದೆಷ್ಟೋ ಜಾಗಗಳು ಒತ್ತುವರಿಯಾಗಿದ್ದು ಆ ಜಾಗದ ಬಗ್ಗೆ ಗಮನಹರಿಸದೆ ಭೂ ಕಳ್ಳರ ಬಾಯಿಗೆ ಬಿಟ್ಟು ಆದಿವಾಸಿಗಳಾದ ದಿಡ್ಡಳ್ಳಿ ನಿರಾಶ್ರಿತರಿಗೆ ಆಶ್ರಯ ನೀಡಲು ಚಡಪಡಿಸುತ್ತಿರುವ ಸರ್ಕಾರದ ಕೆಲಸಕಾರ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕೋದ್ಯಮದವರಾದ ನಾವು ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರು.

ಸಮಾಜಮುಖಿ ಕಾರ್ಯ

ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ವಿಜಯವಾಣಿ ಹಿರಿಯ ವರದಿಗಾರ ಎ.ಆರ್. ರಮೇಶ್ ಕುಟ್ಟಪ್ಪ ಅವರು ಯಾವದೇ ಒಂದು ರಾಜ್ಯ, ರಾಷ್ಟ್ರ, ಗ್ರಾಮ ಹಳ್ಳಿಗಳಲ್ಲಿ ಅನ್ಯಾಯಗಳು ಹಾಗೂ ಭ್ರಷ್ಟಾಚಾರಗಳು ಯಥೇಚ್ಚವಾಗಿ ಕಂಡುಬಂದರೆ ಅಲ್ಲಿ ಮಾಧ್ಯಮಗಳ ಪ್ರಭಾವ ಕುಸಿತವುಂಟಾಗಿದೆ ಎಂದರ್ಥ. ಮಾಧ್ಯಮಗಳು ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾದರೆ ಆತ್ಮಸ್ಥೈರ್ಯ ಬೇಕು. ಒಬ್ಬ ಜನಪ್ರತಿನಿಧಿಯು ಪ್ರತಿಯೊಬ್ಬ ಜನರನ್ನು ಒಂದೇ ರೀತಿಯಲ್ಲಿ ನೋಡಿದ್ದಲ್ಲಿ ಸಾರ್ವಜನಿಕರ ಸಮಸ್ಯೆಯನ್ನು ಅರ್ಥೈಸಿಕೊಂಡು ನೀಗಿಸುವಲ್ಲಿ ಯಶಸ್ವಿಯಾಗಬಹುದು. ಪತ್ರಿಕೋದ್ಯಮವನ್ನು ನಡೆಸುವವರು ಜಾತಿ ,ಧರ್ಮ, ಭೇದ ಲೆಕ್ಕಿಸದೆ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದರು.

ವೃತ್ತಿಯಲ್ಲಿ ಪ್ರಾಮಾಣಿಕತೆ

ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಕಾಪಾಡಿ ಕೊಳ್ಳುವದು ಹೇಗೆ ಎಂಬದರ ಕುರಿತು ಮಾತನಾಡಿದ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಎಸ್.ಜಿ. ಉಮೇಶ್ ಅವರು ಪತ್ರಿಕೋದ್ಯಮ ಎನ್ನುವದು ಕತ್ತಿಯ ಮೇಲಿನ ನಡಿಗೆ ಇಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡು ತಳಹದಿಯಲ್ಲಿ ಸುದ್ದಿಯನ್ನು ಬಿತ್ತರಿಸಬೇಕು. ಸುದ್ದಿ ಬಿತ್ತರವಾದ ನಂತರ ಪತ್ರಿಕೆ ಓದುಗನ ಕೈಯಲ್ಲಿ ಇರುತ್ತದೆ. ಅದನ್ನು ಅವಲೋಕನ ಮಾಡುವವನು ಓದುಗರು ಮಾತ್ರ ಎಂದರು.

ಮಾನನಷ್ಟ ಮೊಕದ್ದಮೆ

ಟಿ.ವಿ. 9 ವರದಿಗಾರ ಮಂಜುನಾಥ್ ಮಾನನಷ್ಟದ ಮೊಕದ್ದಮೆಯನ್ನು ಎದುರಿಸುವ ಕುರಿತು ಮಾತನಾಡಿ, ಯಾವದೇ ಸುದ್ದಿಗಳನ್ನು ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ಯಾವದೋ ಒಂದು ಉದ್ದೇಶದ ಕುರಿತು ವ್ಯಕ್ತಿಗತವಾಗಿ ಸುದ್ದಿಯನ್ನು ಮಾಡಿದ್ದಲ್ಲಿ ಮಾನನಷ್ಟ ಮೊಕದ್ದಮೆ ಯನ್ನು ಎದುರಿಸಬೇಕಾಗುತ್ತದೆ. ಸುದ್ದಿಯನ್ನು ಪ್ರಚಾರ ಮಾಡುವ ಮುನ್ನ ಅದರ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಅರಿತುಕೊಂಡು ಮಾಡಿದ್ದಲ್ಲಿ ಯಾವದೇ ರೀತಿಯ ಅಪವಾದಗಳು ಬರುವದಿಲ್ಲ. ಹಾಗೆಂದು ಅಪವಾದಗಳ ಬಗ್ಗೆ ಚಿಂತಿಸುತ್ತಾ ಕುಳಿತರೆ ಸಮಾಜದ ಆಗುಹೋಗುಗಳನ್ನು ಬಹಿರಂಗ ಪಡಿಸಲು ಮಾಧ್ಯಮಗಳಿಗೆ ಸಾಧ್ಯವಾಗುವದಿಲ್ಲ ಎಂದರು.

ಸುದ್ದಿಮನೆ ಸವಾಲುಗಳು

ಸುದ್ದಿಮನೆಯ ಸವಾಲುಗಳು ಎಂಬ ವಿಷಯದ ಕುರಿತು ಮಾತನಾಡಿದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕೆಯ ವರದಿಗಾರ ಕೆ.ಎ ಆದಿತ್ಯ ಅವರು ಸುದ್ದಿ ಜಾಡು ಹಿಡಿದು ಪತ್ರಕರ್ತರು ಹೋಗುತ್ತಾರೆ. ಕೆಲವೊಮ್ಮೆ ಪತ್ರಕರ್ತರು ಸೂಕ್ಷ್ಮಮತಿಗಳಾಗಿರುವದಿಲ್ಲ. ಕೆಲವೊಮ್ಮೆ ವೃತ್ತಿ ಜೀವನದಲ್ಲಿ ನಾವು ಮಾಡುವ ಸುದ್ದಿಗಳು ಜೀವನಕ್ಕೆ ಅನುಭವ ತರುತ್ತದೆ. ಹಾಗಾಗಿ ಪ್ರತಿಯೊಂದು ಸುದ್ದಿಯನ್ನು ಪರಿಶೀಲಿಸಿ ಪ್ರಕಟಿಸಬೇಕಾಗುತ್ತದೆ ಎಂದರು.

ಪತ್ರಿಕೋದ್ಯಮದಿಂದ ವಿಮುಖ ರಾಗುತ್ತಿರುವ ಯುವಜನಾಂಗ ಎಂಬ ವಿಷಯದ ಕುರಿತು ಮಾತನಾಡಿದ ‘ದಿಗ್ವಿಜಯ’ ವರದಿಗಾರ ಕಿಶೋರ್ ರೈ ಇಂದಿನ ಪತ್ರಿಕೋದ್ಯಮದಲ್ಲಿ ಹಣದ ಆಮಿಷಕ್ಕೆ ಬಲಿಯಾಗದೆ ಕರ್ತವ್ಯ ನಿಷ್ಠೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಪತ್ರಿಕಾರಂಗವು ನಮ್ಮನ್ನು ಮೇಲ್ತರುವದರಲ್ಲಿ ಎರಡು ಮಾತಿಲ್ಲ. ಇಂದಿನ ಸಮಾಜ ಹಾಗೂ ಪತ್ರಿಕೋದ್ಯಮಕ್ಕೆ ಯುವಜನತೆಯ ಅವಶ್ಯಕತೆ ಹೆಚ್ಚಿದೆ. ಪತ್ರಿಕೋದ್ಯಮದ ಶಿಕ್ಷಣದಲ್ಲಿ ಸಿಗುವ ಅನುಭವಕ್ಕಿಂತ ಒಂದು ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವಾಗ ಸಿಗುವ ಅನುಭವವೇ ಜೀವನಕ್ಕೆ ದಾರಿದೀಪವಾಗುತ್ತದೆ ಎಂದರು.

ವಾರ್ತಾಧಿಕಾರಿಗಳಾದ ಚಿನ್ನಸ್ವಾಮಿ ಅವರು ಸರ್ಕಾರದ ಕಾರ್ಯಕ್ರಮಗಳು ಮತ್ತು ಪತ್ರಿಕೆಗಳು ಎಂಬ ವಿಷಯದ ಕುರಿತು ಮಾತನಾಡಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮ ಹಾಗೂ ಪತ್ರಿಕೆಗಳು ಯಥೇಚ್ಚವಾಗಿ ಪ್ರಚಾರವನ್ನು ನೀಡಿ ಜನರಿಗೆ ತಲುಪುವಂತೆ ಮಾಡಬೇಕು. ಪ್ರತಿಯೊಬ್ಬ ಪ್ರಜೆಗೂ ಸರ್ಕಾರದ ರೂಪುರೇಷೆಗಳು, ಬದಲಾವಣೆಗಳು ಕಾರ್ಯಕ್ರಮಗಳ ಸವಿಸ್ತಾರವಾಗಿ ಪ್ರಕಟಿಸಿದ್ದಲ್ಲಿ ಪತ್ರಿಕೆ ಹಾಗೂ ಮಾದ್ಯಮಗಳ ಬಗ್ಗೆ ಪ್ರಜೆಗಳು ಹೆಚ್ಚಿನ ಒಲವು ತೋರಿಸುತ್ತಾರೆ ಎಂದರು.

ತೇಜೋವಧೆ ಸಲ್ಲದು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಜಾಸತ್ಯ ಸಂಪಾದಕ ಡಾ. ಬಿ.ಸಿ ನವೀನ್ ಕುಮಾರ್ ಪ್ರಾರಂಭದಲ್ಲಿ ಯಾವದೇ ವರದಿಯನ್ನು ಮಾಡುವಾಗ ಸ್ವಯಂ ನಿಯಂತ್ರಣ ಮುಖ್ಯ. ನಮ್ಮ ಸಮಾಜದಲ್ಲಿ ನಕಾರಾತ್ಮಕ ಸುದ್ದಿಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ಇಂತಹ ಸುದ್ದಿಗಳಿಂದ ಪತ್ರಕರ್ತರು ಅವರ ವೈಯಕ್ತಿಕ, ಸಾಮಾಜಿಕ ಜೀವನದಲ್ಲಿ ಆಗುವ ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಯೋಚನೆ ಮಾಡಬೇಕಿದೆ. ವರದಿ ಮಾಡುವಾಗ ವೈಯಕ್ತಿಕ ತೇಜೋವಧೆ ಮಾಡದೆ, ಜನರಲ್ಲಿ ಅರಿವನ್ನು ಮೂಡಿಸುವದು ಮೊದಲ ಆದ್ಯತೆ ಆಗಬೇಕು ಎಂದರು.