ಮಡಿಕೇರಿ, ಏ. 18: ಕೊಡಗಿನ ಮೂಲನಿವಾಸಿ ಆದಿವಾಸಿ ಜನಾಂಗ ಯರವ ಸಮಾಜದ ಮೂಲಕ ಆದಿವಾಸಿ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ ಕಳೆದ 5 ವರ್ಷಗಳಿಂದ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ತಾ. 27 ರಿಂದ 30 ರವರೆಗೆ ನಡೆಯುವ ಕುಪ್ಪೇಲೆರಂಡ ಪಂದ್ಯಾವಳಿಯಲ್ಲಿ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಯರವ ಸಮಾಜದ ಸಂಚಾಲಕ ಪಿ.ಕೆ. ಸಿದ್ದಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯರವ ಸಮಾಜದಲ್ಲಿ 32 ಮನೆತನಗಳಿದ್ದು, ಕಳೆದ ಐದು ವರ್ಷಗಳಿಂದ ಪುರುಷರಿಗಾಗಿ ಕ್ರಿಕೆಟ್ ಹಾಗೂ ಮಹಿಳೆಯರಿಗಾಗಿ ಹಗ್ಗಜಗ್ಗಾಟದ ಸ್ಪರ್ಧೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಈ ಬಾರಿ ನಾಲ್ಕು ದಿನಗಳ ಕಾಲ ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಆದಿವಾಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕುಪ್ಪೇಲೆರಂಡ ಮನೆತನದ ಮೂಲಕ ಈ ಬಾರಿಯ ಪಂದ್ಯಾವಳಿ ನಡೆಯುತ್ತಿದ್ದು, ಸುಮಾರು 40 ಆದಿವಾಸಿ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಆದಿವಾಸಿಗಳು ಒಗ್ಗೂಡಿ ಧನ ಸಂಗ್ರಹ ಮಾಡಿ ಪಂದ್ಯಾವಳಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಸರ್ಕಾರ ಸುಮಾರು ರೂ. 5 ಲಕ್ಷ ಅನುದಾನ ನೀಡಿದರೆ ಆದಿವಾಸಿಗಳಿಗೆ ಸೀಮಿತವಾದ ಕ್ರೀಡಾಕೂಟವನ್ನು ಇನ್ನೂ ಅರ್ಥಗರ್ಭಿತವಾಗಿ ನಡೆಸ ಬಹುದೆಂದು ಪಿ. ಕೆ. ಸಿದ್ದಪ್ಪ ತಿಳಿಸಿದರು.

ಪಂದ್ಯಾವಳಿಯ ಕೊನೆಯ ದಿನವಾದ ತಾ. 30 ರಂದು ಚೀನಿದುಡಿ ನೃತ್ಯ ಮತ್ತು ಯರವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸುವ ಯರವ ಸಮುದಾಯದ ಯುವಕ ಹಾಗೂ ಯುವತಿಯರಿಗೆ ವಿಶೇಷ ಬಹುಮಾನವನ್ನು ನೀಡಲಾಗುವದೆಂದು ಸಿದ್ದಪ್ಪ ತಿಳಿಸಿದರು.

2012 ರಲ್ಲಿ ಅಂಜುಲಾತ್ಲೆರಂಡ ಕುಟುಂಬದ ಮೂಲಕ ನಡೆದ ಪಂದ್ಯಾವಳಿಯಲ್ಲಿ ಚೆನ್ನಂಗಿ ಎ ತಂಡ ಪ್ರಶಸ್ತಿ ಪಡೆದುಕೊಂಡಿತ್ತು, 2013 ರಲ್ಲಿ ಬಡಕಮಂಜಿಲ ಕುಟುಂಬ ನಡೆಸಿದ ಕ್ರೀಡಾಕೂಟದಲ್ಲಿ ರಾಯಲ್ ಮೂಕ, 2014 ರ ಕಲ್ಲಿಲ್ಲಾತ್ಲೆರಂಡ ಕ್ರೀಡಾಕೂಟದಲ್ಲಿ ಅಮ್ಮತ್ತಿ ಕ್ರಿಕೆಟರ್ಸ್, 2015ರ ಬಾಳೆಪಾತ್ಲೆರಂಡ ಪಂದ್ಯಾವಳಿ ಯಲ್ಲಿ ಚೆನ್ನಂಗಿ ಬಿ ಹಾಗೂ 2016 ರ ಮಂಜಿಲೆರಂಡ ಪಂದ್ಯಾವಳಿಯಲ್ಲಿ ಮೆಟ್ರೋಸಿಟಿ ತಂಡಗಳು ಪ್ರಶಸ್ತಿ ಯನ್ನು ಪಡೆದುಕೊಂಡಿದ್ದವು. ಈ ಬಾರಿಯ ಕುಪ್ಪೇಲೆರಂಡ ಪಂದ್ಯಾವಳಿ ಪ್ರಶಸ್ತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿ ತಂಡಗಳು ಪೈಪೋಟಿ ನಡೆಸಲಿವೆ ಎಂದರು.

ಯರವ ಸಮಾಜದ ಅಧ್ಯಕ್ಷ ಶಾಂತ ಕುಮಾರ್ ಮಾತನಾಡಿ, ವೀರಾಜಪೇಟೆ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿರುವ ಆದಿವಾಸಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುತ್ತಿ ದ್ದಾರೆ. ಸರ್ಕಾರ ವಿವಿಧ ಜನಾಂಗಗಳ ಕ್ರೀಡಾಕೂಟಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಯರವ ಕ್ರೀಡಾಕೂಟಕ್ಕೂ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ವೈ.ಎ. ಪ್ರಕಾಶ್, ಖಜಾಂಚಿ ವೈ.ಎಸ್. ವಸಂತ, ಕಾರ್ಯದರ್ಶಿ ಪಿ.ಸಿ. ಸಂಜೀವ ಹಾಗೂ ಪಿ. ಎಂ. ನಾಗಿ ಉಪಸ್ಥಿತರಿದ್ದರು.