ಮಡಿಕೇರಿ, ಏ. 18 : ವೆಲ್ಡಿಂಗ್ ಫ್ಯಾಬ್ರಿಕೇಟರ್ಸ್‍ಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ನೂತನವಾಗಿ ಮಡಿಕೇರಿ ವೆಲ್ಡಿಂಗ್ ಫ್ಯಾಬ್ರಿಕೇಟರ್ಸ್ ಅಸೋಸಿಯೇಷನ್‍ನ್ನು ರಚಿಸಲಾಗಿದ್ದು, ಇದರ ಉದ್ಘಾಟನೆ ತಾ. 19 ರಂದು (ಇಂದು) ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದಾಧಿಕಾರಿಗಳು ಶೈಕ್ಷಣಿಕ ಸಾಧನೆ ಮಾಡಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಗುರುತಿಸಿ ಗೌರವಧನ ನೀಡುವುದು, ರಾಷ್ಟ್ರೀಯ ಹಬ್ಬಗಳನ್ನು ಒಟ್ಟಾಗಿ ಆಚರಿಸುವದು, ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವದು, ರಕ್ತದಾನ ಶಿಬಿರ ನಡೆಸುವದು, ಮಾಲೀಕರು ಹಾಗೂ ಕೆಲಸಗಾರರಲ್ಲಿ ಕೆಲಸದ ಭದ್ರತೆಯ ಬಗ್ಗೆ ಅರಿವು ಮೂಡಿಸುವದು, ಅಸೋಸಿಯೇಷನ್‍ನ ಸದಸ್ಯರು ಸಾವಿಗೀಡಾದಲ್ಲಿ ಅವರ ಕುಟುಂಬಕ್ಕೆ ನೆರವು ನೀಡುವದು, ಕೆಲಸಗಾರರಿಗೆ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸುವದು ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ವಿವರಿಸಿದರು.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಡೆಯುವ ವೆಲ್ಡಿಂಗ್ ಫ್ಯಾಬ್ರಿಕೇಷನ್ ಕೆಲಸಕ್ಕೆ ಸರಿಯಾದ ಮಾರ್ಗಸೂಚಿ ಹೊಂದಬೇಕು. ವಿದ್ಯುತ್ ನಿಗಮದಿಂದ ಪರವಾನಗಿ ಪಡೆದು ನಗರಸಭೆಯಿಂದ ನಿರಾಕ್ಷೇಪಣಾ ಪತ್ರದೊಂದಿಗೆ ಅಸೋಸಿಯೇಷನ್‍ನ ಸದಸ್ಯರು ಕೆಲಸ ಮಾಡುವ ಅಗತ್ಯವಿದೆ ಎಂದರು. ಇದನ್ನು ಉಲ್ಲಂಘಿಸಿ ಕೆಲಸ ಮಾಡುವವರ ವಿರುದ್ಧ ಕಾನೂನು ರೀತಿಯಲ್ಲಿ ದೂರು ಸಲ್ಲಿಸಿ ಅವರ ಯಂತ್ರೋಪಕರಣಗಳನ್ನು ಮುಟ್ಟುಗೋಲು ಹಾಕಿಸುವ ಬಗ್ಗೆಯೂ ಸಂಸ್ಥೆ ನಿರ್ಧರಿಸಿದೆ ಎಂದು ಹೇಳಿದರು.

ಸಂಸ್ಥೆಯ ಪದಾಧಿಕಾರಿಗಳು

ಅಸೋಸಿಯೇಷನ್ ಅಧ್ಯಕ್ಷರಾಗಿ ಮದನ್‍ಕುಮಾರ್, ಉಪಾಧ್ಯಕ್ಷರಾಗಿ ವಿ.ಟಿ.ಅಬ್ರಾರ್, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಸಿ.ಜಗದೀಶ್, ಗೌರವಾಧ್ಯಕ್ಷರಾಗಿ ಎಂ.ಎ. ಸುಲೈಮಾನ್, ಜಂಟಿ ಕಾರ್ಯದರ್ಶಿ ಯಾಗಿ ಎಂ.ಎನ್. ಯತೀಶ್, ಖಜಾಂಚಿಯಾಗಿ ಮೊಹಮ್ಮದ್ ಅಶ್ರಫ್, ಜಂಟಿ ಖಜಾಂಚಿಯಾಗಿ ಮೊಹಮ್ಮದಾಲಿ, ನಿರ್ದೇಶಕರಾಗಿ ಸುಲೈಮಾನ್, ಎಂ.ಇ.ಹೈದರ್, ಮಾರ್ಟಿನ್, ಎಂ.ಬಿ.ವಿಶ್ವನಾಥ್, ಸಂಶೀರ್ ಅವರುಗಳನ್ನು ನೇಮಕ ಮಾಡಲಾಗಿದೆ ಎಂದರು.

ಇಂದು ಉದ್ಘಾಟನೆ

ಇಂದು ಸಂಜೆ 7 ಗಂಟೆಗೆ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಹೆಚ್. ರಾಮಕೃಷ್ಣ ಗೌಡ ಅವರು ಸಂಘಕ್ಕೆ ಚಾಲನೆ ನೀಡಲಿದ್ದಾರೆ. ಸಹಾಯಕ ನಿರ್ದೇಶಕ ಶಬೀರ್ ಬಾಷಾ ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ನಗರ ಠಾಣಾಧಿಕಾರಿ ಭರತ್, ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ, ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಕೆ. ಅರುಣ್‍ಕುಮಾರ್, ವಕೀಲ ಸಿ.ಎಸ್. ರಂಜಿತ್‍ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಹಿರಿಯ ಸದಸ್ಯರಾದ ವಿ.ಎ. ತಾಹಿರ್, ನಾಗೇಶ್ ಹಾಗೂ ಮೊಹಮ್ಮದಾಲಿ ಅವರುಗಳನ್ನು ಸನ್ಮಾನಿಸಲಾಗುವದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಮದನ್‍ಕುಮಾರ್, ಉಪಾಧ್ಯಕ್ಷ ವಿ.ಟಿ. ಅಬ್ರಾರ್, ಪ್ರಧಾನ ಕಾರ್ಯದರ್ಶಿ ಜಿ.ಸಿ. ಜಗದೀಶ್, ಖಜಾಂಚಿ ಮೊಹಮ್ಮದ್ ಅಶ್ರಫ್, ಜಂಟಿ ಕಾರ್ಯದರ್ಶಿ ಎಂ.ಎನ್. ಯತೀಶ್ ಹಾಗೂ ನಿರ್ದೇಶಕ ಮಾರ್ಟಿನ್ ಉಪಸ್ಥಿತರಿದ್ದರು.