ಕೂಡಿಗೆ, ಏ. 19: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ 50 ಏಕರೆ ಪ್ರದೇಶದಲ್ಲಿ ಈಗಾಗಲೇ 25 ಎಕರೆ ಪ್ರದೇಶವನ್ನು ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಲು ಕಳೆದ 3 ವರ್ಷಗಳ ಹಿಂದೆ ಗ್ರಾ.ಪಂ. ಸಭೆಯಲ್ಲಿ ತೀರ್ಮಾನಗೊಂಡು ಈ ಜಾಗದಲ್ಲಿ 191 ವಸತಿ ರಹಿತರಿಗೆ ನಿವೇಶನ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಕಡತಗಳನ್ನು ಗ್ರಾ.ಪಂ. ಮೂಲಕ ತಾಲೂಕು ತಹಶೀಲ್ದಾರ್ ಕಚೇರಿಗೂ, ಸರ್ವೆ ಕಚೇರಿಗೂ ರವಾನಿಸಲಾಗಿ 3 ವರ್ಷದ ಹಿಂದೆಯೇ ಸರ್ವೆ ನಡೆಸಿ 25 ಏಕರೆ ಪ್ರದೇಶವನ್ನು ಗುರುತಿಸಲಾಗಿತ್ತು. ಈ ಕಡತದ ಬಗ್ಗೆ ತಾಲೂಕು ಕಚೇರಿಯ ಅಧಿಕಾರಿಗಳು ಕ್ರಮ ಕೈಗೊಳ್ಳದ ಬಗ್ಗೆ ಕೂಡಿಗೆ ಗ್ರಾ.ಪಂ.ನ ಅಧ್ಯಕ್ಷರು ಹಾಗೂ ಸದಸ್ಯರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ದೂರು ನೀಡಿದ್ದಾರೆ. ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್, ಸದಸ್ಯರುಗಳಾದ ರತ್ನಮ್ಮ, ಈರಯ್ಯ, ರಾಮಚಂದ್ರ, ಮಂಜಯ್ಯ, ರವಿ, ಪುಷ್ಪ ಭಾನುವಾರ ಸಚಿವರಿಗೆ ಖುದ್ದು ದೂರು ಸಲ್ಲಿಸಿದರು.

ಸ್ಪಂದಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸ್ಥಳದಲ್ಲಿದ್ದ ಅಪಾರ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು 3 ವರ್ಷವಾದರೂ ಈ ಕಡತ ತಾಲೂಕು ಕಚೇರಿಯಿಂದ ಜಿಲ್ಲಾ ಕೇಂದ್ರದವರೆಗೆ ಮುಂದುವರಿಯದೆ ಇರುವ ಬಗ್ಗೆ ಒಂದೆರಡು ದಿನಗಳ ಒಳಗೆ ಸಮಗ್ರ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.

ಯಾವ ಉದ್ದೇಶಕ್ಕಾಗಿ ತಾಲೂಕು ಕಚೇರಿಯಲ್ಲಿ ಕಡತ ಬಾಕಿಯಾಗಿದೆ, ಕಡತದ ಜವಾಬ್ದಾರಿ ವಹಿಸಿದ ಅಧಿಕಾರಿಯನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸದ ಬಗ್ಗೆ ಅಮಾನತುಗೊಳಿಸಲಾಗುವದು ಎಂದು ಎಚ್ಚರಿಕೆ ನೀಡಿದರು.

ಒಂದು ವಾರದ ಒಳಗೆ ಕಡತಗಳನ್ನು ಪರಿಶೀಲಿಸಿ ಕ್ರಮಬದ್ಧವಾಗಿ ನಿವೇಶನ ರಹಿತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಅವರಿಗೆ ಸೂಚನೆ ನೀಡಿದ್ದರು.

ಬ್ಯಾಡಗೊಟ್ಟ ಗ್ರಾಮದ 25 ಎಕರೆಯಲ್ಲಿ 8 ಏಕರೆ ಜಾಗವನ್ನು ಈಗಾಗಲೇ ದಿಡ್ಡಳ್ಳಿ ನಿರಾಶ್ರಿತರಿಗೆ ನೀಡಲು ಜಿಲ್ಲಾಧಿಕಾರಿಗಳ ಮೂಲಕ ಗುರುತಿಸಲಾಗಿದ್ದು, ಇನ್ನುಳಿದ ಜಾಗದಲ್ಲಿ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರಿಗೆ ನೀಡಲು ತೀರ್ಮಾನಕೈಗೊಳ್ಳಲಾಯಿತು.