ಕುಶಾಲನಗರ, ಏ. 18: ಕುಶಾಲನಗರ ಪಟ್ಟಣದ ವ್ಯಾಪ್ತಿಯಲ್ಲಿ ಭೂ ಮಾಫಿಯ ದಂಧೆಗೆ ಶಾಶ್ವತ ಕಡಿವಾಣ ಹಾಕುವ ಹಿನ್ನಲೆಯಲ್ಲಿ ಹೋರಾಟ ನಡೆಸಲು ಕುಶಾಲನಗರ ಹಿತರಕ್ಷಣಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಕಳೆದ ಕೆಲವು ವರ್ಷ ಗಳಿಂದ ಕುಶಾಲನಗರದಲ್ಲಿ ಸರಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಅಕ್ರಮ ವಾಗಿ ಪರಭಾರೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಅಧಿಕಗೊಳ್ಳುತ್ತಿದ್ದು ಈ ಸಂಬಂಧ ಕಾನೂನಾತ್ಮಕ ಹೋರಾಟಕ್ಕೆ ಸಮಿತಿ ಮೂಲಕ ಸಿದ್ಧತೆಗಳು ನಡೆದಿವೆ.

ಕುಶಾಲನಗರ ಪಟ್ಟಣದಲ್ಲಿ ಹಲವು ಬಡಾವಣೆಗಳಲ್ಲಿ ಉದ್ಯಾನವನ, ರಸ್ತೆ, ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರಿಸಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳು ವದು, ಅಕ್ರಮವಾಗಿ ಮಾರಾಟ ಮಾಡಿರುವದು, ಕೆರೆ ಒತ್ತುವರಿ ಸೇರಿದಂತೆ ಸರಕಾರಕ್ಕೆ ಸೇರಿದ ಕೋಟ್ಯಾಂತರ ಮೌಲ್ಯದ ಭೂಮಿ ಯನ್ನು ತೆರವುಗೊಳಿಸಿ ಸರಕಾರದ ಸುಪರ್ದಿಗೆ ಒಪ್ಪಿಸುವದು ಹೋರಾಟ ಸಮಿತಿಯ ಪ್ರಮುಖ ಉದ್ದೇಶವಾಗಿದೆ ಎಂದು ನೂತನವಾಗಿ ಆಯ್ಕೆಗೊಂಡಿ ರುವ ಸಮಿತಿಯ ಸಂಚಾಲಕ ಕೆ.ಜಿ. ಮನು ತಿಳಿಸಿದ್ದಾರೆ.

ಕುಶಾಲನಗರ ಪ್ರವಾಸಿ ಮಂದಿರ ದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ನಾಮ ನಿರ್ದೇಶಿತ ಸದಸ್ಯ ನಂಜುಂಡಸ್ವಾಮಿ ಉಪಸ್ಥಿತಿಯಲ್ಲಿ ಪಟ್ಟಣದ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಸಭೆ ಸೇರಿ ಚರ್ಚೆ ನಡೆಸಿದರು. ಪಟ್ಟಣದಲ್ಲಿ ನಿಯಮಬಾಹಿರವಾಗಿ ಬಹುಮಹಡಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದು ಈ ಮೂಲಕ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬಗ್ಗೆ ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು 4 ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ಬಂದಿದೆ ಎಂದು ಕೆ.ಜಿ.ಮನು ಸಭೆಗೆ ಮಾಹಿತಿ ಒದಗಿಸಿದರು.

ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಶಾಶ್ವತ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿರ್ದಾಕ್ಷಿಣ್ಯವಾಗಿ ನಿಯಮಬಾಹಿರ ವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲು ಆಡಳಿತಕ್ಕೆ ಸಮಿತಿ ಸಂಪೂರ್ಣ ಬೆಂಬಲ ಘೋಷಿಸುವದಾಗಿ ಮನು ತಿಳಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ನಂಜುಂಡಸ್ವಾಮಿ, ಸರಕಾರಿ ಆಸ್ತಿಗಳನ್ನು ಕಾಪಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಕ್ರಮ ಚಟುವಟಿಕೆಗಳಿಗೆ ಯಾವದೇ ರೀತಿಯ ಕುಮ್ಮಕ್ಕು ನೀಡಬಾರದು ಎಂದು ಪ.ಪಂ. ಅಧ್ಯಕ್ಷರಿಗೆ ಮನವಿ ಮಾಡಿದ್ದರು. ನೂತನವಾಗಿ ರಚನೆಗೊಂಡಿರುವ ಕುಶಾಲನಗರ ಹಿತರಕ್ಷಣಾ ಹೋರಾಟ ಸಮಿತಿ ಮೂಲಕ ಪಟ್ಟಣದ ಹಿತ ಕಾಯುವ ಅಧಿಕಾರಿಗಳಿಗೆ ಬೆಂಬಲ, ಪಕ್ಷಾತೀತ ವಾದ ಹೋರಾಟಕ್ಕೆ ನಿರ್ಣಯ ಹಾಗೂ ಜಲಮೂಲಗಳ ಸಂರಕ್ಷಣೆ ಸೇರಿದಂತೆ ಜೀವನದಿ ಕಾವೇರಿ ಮಾಲಿನ್ಯ ತಪ್ಪಿಸುವದು ಈ ಎಲ್ಲಾ ವಿಷಯಗಳನ್ನು ಒಳಗೊಂಡು ಜನರಿಗೆ ಅರಿವು, ಜಾಗೃತಿ ಮೂಡಿಸುವ ಮೂಲಕ ಹೋರಾಟ ರೂಪಿಸಲಾಗುವದು ಎಂದರು.

ಸಭೆಯಲ್ಲಿ ವಿವಿಧ ಪಕ್ಷಗಳ ಪ್ರಮುಖರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.