ಮಡಿಕೇರಿ, ಏ. 19: ಕೊಡಗು ಜಿಲ್ಲೆ ದೇಶದಲ್ಲಿ ಅತ್ಯಧಿಕ ಹೋಂಸ್ಟೇಗಳನ್ನು ಹೊಂದಿದ್ದು, ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಜನರ ಆರ್ಥಿಕತೆಗೆ ಹೋಂಸ್ಟೇಗಳೂ ಆಸರೆಯಾಗಿದೆ. ಸರ್ಕಾರ ಹಲವು ಬಾರಿ ಹೋಂ ಸ್ಟೇಗಳನ್ನು ಅಧಿಕೃತಗೊಳಿಸುವಂತೆ ಆದೇಶ ನೀಡಿದ್ದರೂ, ಹೋಂಸ್ಟೇ ಮಾಲೀಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನವರಿ 26ರ ಮುಂಚಿತವಾಗಿ ಜಿಲ್ಲೆಯಲ್ಲಿರುವ ಅನಧಿಕೃತ ಹೋಂಸ್ಟೇಗಳನ್ನು ನೋಂದಣಿ ಮಾಡಿಕೊಂಡು ಅಧಿಕೃತಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜನವರಿ 26ರ ನಂತರವೂ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದ ಪರಿಣಾಮ ಇದುವರೆಗೆ ಜಿಲ್ಲೆಯಲ್ಲಿ 561 ಹೋಂಸ್ಟೇಗಳು ಮಾತ್ರ ನೋಂದಾವಣೆಗೊಂಡು ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಪಟ್ಟಿಗೆ ಸೇರ್ಪಡೆಗೊಂಡಿವೆ.
ಹೋಂಸ್ಟೇಗಳಲ್ಲಿ ಸಾಕಷ್ಟು ಅಕ್ರಮಗಳಾಗುತ್ತಿವೆ, ಹೆಚ್ಚಿನ ದರ ವಸೂಲಿ ಮಾಡಿ ಸೂಕ್ತ ಸೌಲಭ್ಯವೂ ಒದಗಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ನೋಂದಾಯಿತ ಹೋಂ ಸ್ಟೇಗಳನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ನಿಯಂತ್ರಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಹೋಂ ಸ್ಟೇಗಳನ್ನು ಅಧಿಕೃತವಾಗಿ ನೋಂದಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ದೇಶದಲ್ಲಿಯೇ ಅತ್ಯಧಿಕ ಹೋಂಸ್ಟೇಗಳನ್ನು ಹೊಂದಿರುವ ಕೊಡಗು ಜಿಲ್ಲೆಗೆ ಅತ್ಯಧಿಕ ಪ್ರವಾಸಿಗರೂ ಬರುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಮಾಹಿತಿಯ ಪ್ರಕಾರ ಕಳೆದ 1 ವರ್ಷ ಸುಮಾರು 15-20 ಲಕ್ಷ ಪ್ರವಾಸಿಗರು ಕೊಡಗಿಗೆ ಲಗ್ಗೆಯಿಟ್ಟಿದ್ದಾರೆ.
ಕೊಡಗಿಗೆ ಬರುವ ಪ್ರವಾಸಿಗರಿಗೆ ಹೋಂಸ್ಟೇಗಳು ಮೊದಲ ಆಯ್ಕೆಯಾಗಿತ್ತು. ಹಣ ಗಳಿಸುವ ಏಕೈಕ ಉದ್ದೇಶ ಮಾಡಿಕೊಂಡಿರುವವರು ಪ್ರವಾಸಿಗರಿಂದ ಅಧಿಕ ಹಣ ವಸೂಲಿ, ಸೂಕ್ತ ಸೌಲಭ್ಯ ನೀಡದಿರುವದು, ಅಕ್ರಮ ವಹಿವಾಟುಗಳಿಗೆ ಹೋಂಸ್ಟೇಗಳ ಬಳಕೆ, ಇವೆಲ್ಲದರ ಜೊತೆಗೆ ಪೊಲೀಸ್ ಇಲಾಖೆಗೆ ಸಮಸ್ಯೆ ಸೃಷ್ಟಿಸುವಂತೆ ಹೋಂಸ್ಟೇಗಳಲ್ಲಿ ಅಕ್ರಮ ಚಟುವಟಿಕೆ, ವೇಶ್ಯಾವಾಟಿಕೆಯ ಪ್ರಕರಣಗಳು ನಡೆದಿದ್ದು, ಕೊಡಗಿನ ಹೋಂಸ್ಟೇಗಳಿಗೆ ಕಪ್ಪು ಚುಕ್ಕೆಯಂತಾಯಿತು.
ಹೀಗಾಗಿಯೇ ಉತ್ತಮ ರೀತಿಯಲ್ಲಿ, ಅಧಿಕೃತವಾಗಿ ಹೋಂಸ್ಟೇಗಳನ್ನು ನಡೆಸುತ್ತಿರುವವರನ್ನು ಪ್ರೋತ್ಸಾಹಿಸುವದರ ಜೊತೆಗೆ ಕಾನೂನನ್ನು ಗಾಳಿಗೆ ತೂರಿ ಹೋಂಸ್ಟೇಗಳನ್ನು ಲಾಭದ ಉದ್ದೇಶಕ್ಕೆ ಮಾತ್ರ ಬಳಸುವವರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಹೋಂಸ್ಟೇಗಳ ನೋಂದಣಿಗೆ ಮುಂದಾಗಿದೆ.
ಪ್ರವಾಸೋದ್ಯಮ ಇಲಾಖೆಯ ನೂತನ ಕಾನೂನಿನ ಪ್ರಕಾರ ಬಾಡಿಗೆ ಮನೆಯಲ್ಲಿ ಹೋಂಸ್ಟೇ ನಡೆಸುವಂತಿಲ್ಲ. ಸ್ವಂತ ಕಟ್ಟಡ ಹೊಂದಿರಬೇಕು. ಅದೇ ಕಟ್ಟಡದಲ್ಲಿ ಮಾಲೀಕರು ವಾಸವಾಗಿರಬೇಕು. ಸಿ.ಸಿ. ಕ್ಯಾಮರಾ ಕಡ್ಡಾಯವಾಗಿ ಅಳವಡಿಸಿರಬೇಕು ಎಂಬಿತ್ಯಾದಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿರಬೇಕು. ಇಂತಹ ಹೋಂಸ್ಟೇಗಳು ಮಾತ್ರ ಅಧಿಕೃತವಾಗುತ್ತದೆ.
-ಚಂದ್ರ ಉಡೋತ್.