ಮಡಿಕೇರಿ, ಏ. 18: ಜಿಲ್ಲೆಯಲ್ಲಿ ವಿವಾದಕ್ಕೆ ಎಡೆಯಾಗುವ ಮೂಲಕ ರಾಜ್ಯ ಸರಕಾರಕ್ಕೂ ತಲೆನೋವಾಗಿರುವ ದಿಡ್ಡಳ್ಳಿ ಜಾಗ ವಿವಾದಕ್ಕೆ ಸಂಬಂಧಪಟ್ಟಂತೆ ಅದು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಸರಕಾರಕ್ಕೆ ಮನವರಿಕೆಯಾದಂತಿದೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರುಗಳಿಗೆ ಅರಣ್ಯಾಧಿಕಾರಿಗಳು ಈ ಹಿಂದೆಯೇ ಸ್ಪಷ್ಟ ಚಿತ್ರಣ ಕೊಟ್ಟಿರುವದಾಗಿ ತಿಳಿದು ಬಂದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಸಲಾದ ಉನ್ನತ ಮಟ್ಟದ ಸಭೆಗೂ ಮುನ್ನ, ದಿಡ್ಡಳ್ಳಿಯಲ್ಲಿ ಕೆಲವರ ಚಿತಾವಣೆಯಿಂದ ಖಾಯಂ ವಸತಿಗಾಗಿ ಹುಟ್ಟಿಕೊಂಡಿರುವ ಹೋರಾಟದ ವೇಳೆಯೇ ವಾಸ್ತವವನ್ನು ಸರಕಾರದ ಗಮನಕ್ಕೆ ತರಲಾಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.

ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶವೆಂದು ಅರಣ್ಯ ಇಲಾಖೆ ಖಚಿತಪಡಿಸಿದ್ದರೂ, ಕೆಲವು ಹೋರಾಟಗಾರರು ಪೈಸಾರಿ ಎಂದು ವಾದಿಸಿದ್ದರು.

ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಪ್ರಕಾರ ದೇಶದಲ್ಲಿರುವ ಸಂರಕ್ಷಿತ ಅರಣ್ಯ ಭೂಮಿ ಯಾವದೇ ಹಂತದಲ್ಲಿ ಪ್ರಸಕ್ತ ಇರುವ ವಿಸ್ತೀರ್ಣದಲ್ಲಿ ಕಡಿಮೆಯಾಗದಂತೆ ಕಾಪಾಡಲು ಕೇಂದ್ರ ಸರಕಾರ ಕೂಡ ಕಟ್ಟುನಿಟ್ಟಿನ ಆದೇಶ ಮಾಡಿರುವ ಹಿನ್ನೆಲೆ, ಅಂತಹ ಅರಣ್ಯವನ್ನು ವಸತಿ ಯೋಜನೆಗೆ ಕಲ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಗೊತ್ತಾಗಿದೆ.

ದಿಡ್ಡಳ್ಳಿ ಪ್ರಕರಣದಲ್ಲಿ ಕೂಡ ಈ ಅಂಶವನ್ನು ಅರಣ್ಯಾಧಿಕಾರಿಗಳು ರಾಜ್ಯ ಸರಕಾರಕ್ಕೆ ದೃಢಪಡಿಸಿದ್ದಾರೆ. ಆ ಮೇರೆಗೆ ಅತಿಕ್ರಮಣ ತೆರವುಗೊಳಿಸಿರುವ ಪರಿಣಾಮ ವಿವಾದ ಜಟಿಲಗೊಂಡು ಸ್ಥಳೀಯವಾಗಿ ಬಗೆಹರಿಯಲಿದ್ದ ಸಮಸ್ಯೆ ಹೊರಗಿನವರ ಪ್ರವೇಶದಿಂದ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂಬದು ಅರಣ್ಯ ಇಲಾಖೆಯ ನಿಲುವು.

ಬದಲಾಗಿ ದಿಡ್ಡಳ್ಳಿ ಹಾಡಿಯ ನೈಜ ಫಲಾನುಭವಿಗಳು ವಾಸ್ತವ ಅರ್ಥೈಸಿಕೊಂಡು ಮೀಸಲು ಅರಣ್ಯದಿಂದ ಬೇರೆಡೆಗೆ ಪುನÀರ್ವಸತಿ ಕಲ್ಪಿಸಿಕೊಡಲು ಸಮ್ಮತಿಸಿದರೆ ಸೂರು ಲಭಿಸಬಹುದು ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ. ಆ ಹೊರತು ದಿಡ್ಡಳ್ಳಿಯಲ್ಲೇ ವಸತಿಗೆ ಪಟ್ಟು ಹಿಡಿದರೆ ಕಾನೂನು ಸಮಸ್ಯೆಯೊಂದಿಗೆ ಅರಣ್ಯ ಕಾಯ್ದೆ ಕೂಡ ತೊಡಕಾಗಿ ತೊಂದರೆಗೆ ಒಳಗಾಗುವ ಸನ್ನಿವೇಶ ಎದುರಾದೀತು ಎಂಬದಾಗಿ ಅರಣ್ಯ ಇಲಾಖೆಯ ಅಭಿಪ್ರಾಯವಾಗಿದೆ.

ಹೀಗಾಗಿ ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ದಿಡ್ಡಳ್ಳಿ ಗಿರಿಜನರಿಗೆ ಪುನರ್ವಸತಿ ಕಲ್ಪಿಸಲು ಸೂಕ್ತ ನಿವೇಶನ ಗುರುತಿಸಿ, ಶಾಶ್ವತ ಪರಿಹಾರ ಕಂಡುಹಿಡಿಯುವ ದಿಸೆಯಲ್ಲಿ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದಾರೆ. ಎರಡು ದಿನಗಳ ಕೊಡಗು ಪ್ರವಾಸ ಹಮ್ಮಿಕೊಂಡಿದ್ದ ಸಚಿವರು ಅರಣ್ಯ ಜಾಗದಲ್ಲಿ ಹುಚ್ಚಾಟ ಬೇಡವೆಂದು ಸೂಚ್ಯವಾಗಿ ಎಚ್ಚರಿಸಿದ್ದಾರೆ.

ದಿಡ್ಡಳ್ಳಿ ಸಮಸ್ಯೆ ಶೀಘ್ರ ಇತ್ಯರ್ಥಗೊಳ್ಳದಿದ್ದಲ್ಲಿ ಜಿಲ್ಲೆಯಲ್ಲಿ ಅರಾಜಕತೆ ಉಂಟಾಗಬಹುದು ಎಂಬ ಆತಂಕ ಸ್ಥಳೀಯರದ್ದಾಗಿದೆ. ಪೊಲೀಸ್ ಗುಪ್ತಚರ ಇಲಾಖೆ ಕೂಡ ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆದಿರುವದಾಗಿ ತಿಳಿದು ಬಂದಿದೆ.

ಈ ಎಲ್ಲವನ್ನು ಅರ್ಥೈಸಿಕೊಂಡಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ದಿಡ್ಡಳ್ಳಿ ನಿರಾಶ್ರಿತರು ಸೇರಿದಂತೆ ಜಿಲ್ಲೆಯ ಎಲ್ಲ ನಿರ್ವಸತಿಗರಿಗೆ ವಸತಿ ಹಾಗೂ ಕೃಷಿ ಭೂಮಿ ಕಲ್ಪಿಸಲು ಖಾಲಿ ಜಾಗ ಗುರುತಿಸುವಂತೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಡಳಿತಕ್ಕೆ ಕಟ್ಟಪ್ಪಣೆ ಮಾಡಿದ್ದಾರೆ.

ಈ ನಡುವೆ ತಾ. 19 ರಂದು (ಇಂದು) ರಾಜ್ಯ ಸಂಪುಟ ಸಭೆಯಲ್ಲಿ ಮತ್ತೊಂದು ಬಾರಿ ಚರ್ಚಿಸಿ ಒಂದು ನಿರ್ಧಾರ ತೆಗೆದುಕೊಳ್ಳುವದಾಗಿ ಹೇಳಿರುವ ಸಚಿವ ಕಾಗೋಡು ತಿಮ್ಮಪ್ಪ ಮಾತು ಏನಾದೀತು ನೋಡಬೇಕಷ್ಟೆ.

-ಶ್ರೀಸುತ