ಸೋಮವಾರಪೇಟೆ, ಏ. 18: ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಮಾಜಿ ಸಂಸದೆ, ಚಿತ್ರ ನಟಿ ರಮ್ಯಾ

ಅವರ ವಿರುದ್ಧ ಸೋಮವಾರ ಪೇಟೆಯ ನ್ಯಾಯಾಲಯದಲ್ಲಿ ದಾಖಲಿಸಲಾಗಿದ್ದ ಖಾಸಗಿ ಮೊಕದ್ದಮೆಯನ್ನು ನ್ಯಾಯಾಲಯ ವಜಾಗೊಳಿಸಿದೆ. ಆ ಮೂಲಕ ಚಿತ್ರ ನಟಿ ರಮ್ಯಾಗೆ ‘ರಿಲೀಫ್’ ಸಿಕ್ಕಂತಾಗಿದೆ.

ಕಳೆದ ವರ್ಷ ಪಾಕಿಸ್ತಾನ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಾಜಿ ಸಂಸದೆ ರಮ್ಯಾ, ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿದ್ದರು. ಇವರ ಹೇಳಿಕೆಗೆ ಕೆಲವೆಡೆ ಪ್ರತಿಭಟನೆಗಳೂ ನಡೆದಿದ್ದವು. ಭಾರತದಲ್ಲಿ ಪಾಕಿಸ್ತಾನವನ್ನು ಹೊಗಳುವ ಮೂಲಕ ದೇಶದ್ರೋಹ ಎಸಗಿದ್ದಾರೆ ಎಂದು ಸೋಮವಾರಪೇಟೆಯ ವಕೀಲ ವಿಠಲ್ ಅವರು ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಈ ದೂರಿನ ಬಗ್ಗೆ ಹಲವು ತಿಂಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮವಾಗಿ, ದೂರನ್ನು ವಜಾಗೊಳಿಸಿದೆ. ಪಾಕಿಸ್ತಾನವನ್ನು ಅಧಿಕೃತವಾಗಿ ಶತ್ರುರಾಷ್ಟ್ರವೆಂದು ಪರಿಗಣಿಸಿಲ್ಲ. ಅಥವಾ ಸರ್ಕಾರವೂ ಸಹ ಘೋಷಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ದೂರನ್ನು ವಜಾಗೊಳಿಸಿದೆ.

ಪಾಕಿಸ್ತಾನದ ಯೋಧರು ಹಾಗೂ ಭಯೋತ್ಪಾದಕರಿಂದ ನಮ್ಮ ದೇಶದ ಸೈನಿಕರು ಹತ್ಯೆಯಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಪಾಕಿಸ್ತಾನದ ಜನರನ್ನು ತಪ್ಪಿತಸ್ಥರೆಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಲಯ, 124/ಎ ಪ್ರಕಾರ ದಾಖಲಾದ ರಾಷ್ಟ್ರದ್ರೋಹ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ರಮ್ಯಾ

ಹೇಳಿಕೆ ರಾಷ್ಟ್ರ ದ್ರೋಹ ವ್ಯಾಪ್ತಿಗೆ ಬರುವದಿಲ್ಲ ಎಂದು ದೂರನ್ನು ವಜಾಗೊಳಿಸಿದೆ.