ಶ್ರೀಮಂಗಲ, ಏ. 19: ದಕ್ಷಿಣ ಕೊಡಗಿನ ಪಾಕೇರಿ ನಾಡ್ ಬಿರುನಾಣಿ ಗ್ರಾಮದಲ್ಲಿನ ಶ್ರೀ ಪುತ್ತು ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭ ವಿಶಿಷ್ಟವಾದ ಪೊಮ್ಮಂಗಲ ಆಚರಣೆ ಜನರ ಗಮನ ಸೆಳೆಯುವದರೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪಾಕೇರಿನಾಡು ಬಿರುನಾಣಿಯ ಶ್ರೀ ಪುತ್ತ್ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದಲ್ಲಿ ಕೊಡವ ಮದುವೆ ಪದ್ಧತಿಯಲ್ಲಿ ವಧು-ವರರು ಧರಿಸುವ ಉಡುಗೆಯನ್ನು ಪರಸ್ಪರ ಅದಲು ಬದಲಾಗಿ ಧರಿಸಿ ಹರಕೆ ತೀರಿಸುವದು ವಿಶೇಷ. ಅಂದರೆ ಗಂಡು ಮಕ್ಕಳಿಗೆ ಸ್ತ್ರೀಯರಂತೆ ಸೀರೆ-ರವಿಕೆ ಉಡುಗೆ ಹಾಗೂ ಹೆಣ್ಣು ಮಕ್ಕಳಿಗೆ ಪುರುಷರಂತೆ ಬಿಳಿ (ಕುಪ್ಯಚೇಲೆ) ಕುಪ್ಪಸದ ಉಡುಪನ್ನು ಧರಿಸಿ ಅವರವರ ಮನೆಯಲ್ಲಿ ಕೊಡವ ಮದುವೆ ಸಂದರ್ಭ ಮಾಡುವ ಎಲ್ಲಾ ಸಾಂಪ್ರದಾಯಿಕ ಪದ್ಧತಿಯ ವಿಧಿ-ವಿಧಾನಗಳನ್ನು ಮಾಡಲಾಯಿತು.
ಸಾಂಪ್ರದಾಯಿಕ ಮೂರು ಕಾಲಿನ ಮುಕ್ಕಲಿಯಲ್ಲಿ ಕೂರಿಸಿ ಮದುವೆಯಲ್ಲಿ ಜನರು ಆಶೀರ್ವಾದಿ ಸುವಂತೆ ‘ಪೊಮ್ಮಂಗಲ’ದಲ್ಲಿ ಅಶೀರ್ವದಿಸಿದರು. ಉಡುಪು ಧರಿಸಿದವರು ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆದರು. ಮನೆಯಲ್ಲಿನ ಸಂಪ್ರದಾಯದ ನಂತರ ದೇವಸ್ಥಾನಕ್ಕೆ ಬಂದು 3 ಸುತ್ತು ಪ್ರದಕ್ಷಿಣೆ ಹಾಕಿ ಹರಕೆ ತೀರಿಸಿದರು.
ಇದೊಂದು ನಂಬಿದ ಭಗವತಿ ದೇವಿಗೆ ಹರಕೆಯಾಗಿದ್ದು, ಮಕ್ಕಳಿಗೆ ಅನಾರೋಗ್ಯ ಕಾಣಿಸಿಕೊಂಡ ಸಂದರ್ಭ ವಾಸಿಯಾಗಲು, ಮದುವೆಯಾಗದವರಿಗೆ ಮದುವೆಯಾಗಲು, ಮದುವೆಯಾಗಿ ಮಕ್ಕಳಾಗದವರಿಗೆ ಮಕ್ಕಳಾಗುವಂತೆ ಕೋರಿಕೆ ಸಲ್ಲಿಸಿ ಅದಕ್ಕಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಮಕ್ಕಳ ಆರೋಗ್ಯ ವಾಸಿಯಾದ ನಂತರ ಆ ಮಕ್ಕಳನ್ನು ತಂದೆ-ತಾಯಿ ಪೊಮ್ಮಂಗಲ ಮಾಡಿಸುತ್ತಾರೆ.
ಹಾಗೆಯೇ ಮದುವೆಯಾಗಿ ಮಕ್ಕಳಾಗದವರು ಮಕ್ಕಳಾಗುವಂತೆ ಹರಕೆ ಮಾಡಿಕೊಂಡು ಹುಟ್ಟುವ ಮಗುವನ್ನು ಇಲ್ಲಿ ಪೊಮ್ಮಂಗಲ ಮಾಡಿಸುತ್ತಾರೆ. ಮಕ್ಕಳಿಗೆ ತಾಯಿ-ತಂದೆ ಪೊಮ್ಮಂಗಲದ ಹರಕೆ ಮಾಡಿಕೊಂಡು ತೀರಿಸದಿದ್ದರೆ ಅಂತ ಮಕ್ಕಳಿಗೆ ಕಂಕಣಭಾಗ್ಯ ಒದಗಿ ಬರುವದಿಲ್ಲವೆಂಬ ನಂಬಿಕೆಯೂ ಇದೆ. ಆದ್ದರಿಂದ ಮಕ್ಕಳು ಪ್ರೌಢಾವಸ್ಥೆಗೆ ಬರುವ ಮೊದಲು ಅಂದರೆ ವಿಶೇಷವಾಗಿ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಮೊದಲೇ ಈ ಹರಕೆ ತೀರಿಸಬೇಕು. ಗಂಡು ಮಕ್ಕಳು ಮದುವೆಗೆ ಮುನ್ನ ಹರಕೆ ತೀರಿಸಬೇಕು.
ಈ ಸಂದರ್ಭ ಕೊಡವ ಜಾನಪದ ಬಾಳೋ ಪಾಟ್‍ನೊಂದಿಗೆ ಕಲಶ ಹೊತ್ತು ಭಗವತಿ ದೇವಿಗೆ ಹರಕೆ ಒಪ್ಪಿಸುವ ಪದ್ಧತಿ ಪುರಾತನ ಕಾಲದಿಂದಲೂ ಸ್ಥಳೀಯ ಜನರ, ಭಕ್ತಾದಿಗಳ ನಂಬಿಕೆಯಲ್ಲಿ ನಡೆದುಕೊಂಡು ಬಂದಿದೆ.
ಪೂರ್ವಾಹ್ನ 5 ಗಂಟೆಗೆ ದೇವರ ದರ್ಶನ, 6 ರಿಂದ 7 ರವರೆಗೆ ತೂಚಂಬಲಿ ಪೂಜೆ 8.30 ಗಂಟೆಗೆ ಚಾಮುಂಡಿ ದೇವಿಗೆ ಹರಕೆ ಒಪ್ಪಿಸುವದು. ಮಧ್ಯಾಹ್ನ 2.00 ಗಂಟೆಗೆ ಪೊಮ್ಮಂಗಲ ದೇವಸ್ಥಾನಕ್ಕೆ ಹತ್ತುವದು, ನೆರಪು ಸಂಜೆ 5 ಗಂಟೆಗೆ ದೇವರ ದರ್ಶನ ರಾತ್ರಿ ಪಲ್ಲಿಬೇಟೆ (ಶಯನ) ದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ 28 ಪೊಮ್ಮಂಗಲ ಹರಕೆ ಹೊತ್ತ ಭಕ್ತಾದಿಗಳು ಹರಕೆ ಒಪ್ಪಿಸಿದರು. ದೇವ ತಕ್ಕ ಅಣ್ಣಳಮಾಡ ಟಿ ಗಿರೀಶ್, ನಾಡ್ ತಕ್ಕ ಚಂಙಣ ಮಡ ಕೆ. ಮಂದಣ್ಣ, ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಕೆ. ಮುತ್ತಣ, ಕಾರ್ಯದರ್ಶಿ ಕಳಕಂಡ ಜಿತು ಕುಶಾಲಪ್ಪ ,ಆಡಳಿತ ಮಂಡಳಿ ಸದಸ್ಯರು ಹಾಗೂ ಅರ್ಚಕ ದೀಕ್ಷಿತ್ ಮುಂದಾಳತ್ವದಲ್ಲಿ ನಡೆದ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.