ಕುಶಾಲನಗರ, ಏ. 18: ಹದಿನಾರನೇ ಶತಮಾನದ ಕನಕದಾಸರ ಕುರಿತು ಅಧ್ಯಯನ ಇಪ್ಪತ್ತೊಂದನೇ ಶತಮಾನದಲ್ಲಿ ಹೇಗೆ ಪ್ರಸ್ತುತ ಎಂಬ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ತಿಳಿಸಿದರು.
ಕುಶಾಲನಗರ ಹೋಬಳಿ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರಲ್ಲಿನ ಕನ್ನಡ ಅಧ್ಯಯನ ವಿಭಾಗ ಹಾಗೂ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಕನಕ ಓದು’ ಎರಡು ದಿನಗಳ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.
ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಕನಕದಾಸರ ಜೀವನ ಮತ್ತು ಸಾಹಿತ್ಯ ಕುರಿತ ಅಧ್ಯಯನ, ಅವುಗಳ ಪ್ರಕಟಣೆ ಮತ್ತು ಪ್ರಸಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಯುವಜನ ವಿದ್ಯಾರ್ಥಿ ಸಮುದಾಯಕ್ಕಾಗಿ ಕನಕ ಸಂಸ್ಕøತಿ ಕಮ್ಮಟ, ರಸಗ್ರಹಣ ಶಿಬಿರಗಳ ಸಂಘಟನೆ ಮಾಡುವದು ಹಾಗೂ ಹಿರಿಯ ಮತ್ತು ಯುವ ವಿದ್ವಾಂಸರಿಗೆ ಸಂಶೋಧನೆಗೆ ನೆರವು ನೀಡುವದು ಮೊದಲಾದ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಈ ರೀತಿಯ ಅಧ್ಯಯನ ಕಾರ್ಯಗಳಿಗೆ ಯುವ ಸಮುದಾಯವನ್ನು ತೊಡಗಿಸಿಕೊಳ್ಳುವದು ಪ್ರಮುಖ ಆಶಯವಾಗಿದೆ ಎಂದರು.
ಸುಮಾರು 193 ಕಡೆಗಳಲ್ಲಿ ಇಂತಹ ಶಿಬಿರಗಳನ್ನು ಏರ್ಪಡಿಸಲಾಗಿದೆ. ಕನಕದಾಸರ ನಾಲ್ಕು ಕೃತಿಗಳನ್ನು ಮತ್ತು ಕೀರ್ತನೆಗಳ ಆಯ್ದ ಭಾಗಗಳನ್ನು ಹಾಗೂ ಕನಕದಾಸರ ಸ್ಥೂಲವಾದ ಪರಿಚಯಿಸುವಂತಹ ಆಯ್ದ ಲೇಖನಗಳನ್ನು ಸೇರಿಸಿ ಸಿದ್ಧಪಡಿಸಿದ ಕೈಪಿಡಿಯನ್ನು ವಿದ್ಯಾರ್ಥಿಗಳಿಗೆ ಪ್ರಾರಂಭದಲ್ಲಿಯೇ ಒದಗಿಸುವದು, ಆ ಕೃತಿಯನ್ನು ಓದಿಕೊಂಡು ಬಂದು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಕನಕದಾಸರ ಕೃತಿಗಳ ಆಯ್ದ ಭಾಗಗಳನ್ನು ವಾಚಿಸುವಂತೆ ಪ್ರೋತ್ಸಾಹಿಸುವದು ಈ ಶಿಬಿರದ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ವಿ. ರವೀಂದ್ರಾಚಾರಿ ಅವರು ಮಾತನಾಡಿ, ದಾರ್ಶನಿಕರ ಚಿಂತನೆಯನ್ನು ಓದಿ ಅರ್ಥ ಮಾಡಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಯುವ ಸಮುದಾಯವನ್ನು ಪ್ರೇರೇಪಿಸುತ್ತಿರುವ ಸಂಸ್ಥೆಯ ಕಾಳಜಿ ಶ್ಲಾಘನೀಯ. ಇಂತಹ ಶಿಬಿರಗಳಿಂದ ಜ್ಞಾನದ ವಿಸ್ತೀರ್ಣ ಬೆಳೆಯುತ್ತದೆ ಮತ್ತು ದಾರ್ಶನಿಕರ ಚಿಂತನೆಗಳು ಸಾರ್ವಕಾಲಿಕವಾಗಿ ಉಳಿಯುತ್ತವೆ ಎಂದು ನುಡಿದರು.
ಶಿಬಿರದ ನಿರ್ದೇಶಕ ಪ್ರೊ. ಶಿವಸ್ವಾಮಿ, ಶಿಬಿರ ಸಂಚಾಲಕ ಡಾ. ಮಹಾಂತೇಶ ಪಾಟೀಲ, ಸಂವಾದದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಜಮೀರ್ ಅಹಮದ್, ಶ್ರೀನಿವಾಸ್, ಯದುಕುಮಾರ್, ನೇತ್ರಾವತಿ ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.