ಮಡಿಕೇರಿ, ಏ. 20: ಸೂರ್ಲಬ್ಬಿ ನಾಡಿನ ಐತಿಹಾಸಿಕ ಶ್ರೀ ಕಾಳತಮ್ಮೆ ದೇವಿ ಹಾಗೂ ಶ್ರೀ ಕ್ಷೇತ್ರಪಾಲ ದೇವರ ವಾರ್ಷಿಕೋತ್ಸವವು ತಾ. 19 ರಂದು ತೆರೆಕಂಡಿತು. ತಾ. 7 ರಂದು ಹಬ್ಬದ ಕಟ್ಟು ಬೀಳುವದರೊಂದಿಗೆ ತಾ. 11 ರಂದು ಪಟ್ಟಣಿ, ದೇವರ ಜಳಕ, ಭಂಡಾರ ತರುವ ಮೂಲಕ ಮಹಾ ಪೂಜೆ ನೆರವೇರಿತು.
ತಾ. 12 ರಿಂದ ದೇವ ಸನ್ನಿಧಿಯಲ್ಲಿ ಬೆಳಗ್ಗಿನ ಜಾವ ಬೊಳಕಾಟ, ದೈವಿಕ ಪೂಜೆಯೊಂದಿಗೆ ತಾ. 17 ರಂದು ಬೆಳಿಗ್ಗೆ ಹರಕೆ, ಕಾಣಿಕೆ, ದರ್ಶನ ನೆರವೇರಿತು. ತಾ. 18ರ ಉಷಾಃಕಾಲ ಪೂಜೆ, ಶತಮಾನಗಳ ಇತಿಹಾಸ ಹಿನ್ನೆಲೆಯ ಖಡ್ಗದೊಂದಿಗೆ ಆರಾಟ್-ಬೊಳಕಾಟ್ ಸಹಿತ ವಾರ್ಷಿಕ ಮಹಾಪೂಜೆ ನಡೆಯಿತು.
ಅಂದು ರಾತ್ರಿ ಬಲಿಸೇವೆ, ಇಡುಗಾಯಿ ಸಹಿತ ಕಟ್ಟು ಮುರಿಯುವದರೊಂದಿಗೆ ದೇವರಿಗೆ ಕ್ಷೀರಾಭಿಷೇಕ, ಮಹಾಪೂಜೆ ಜರುಗಿದ ಬಳಿಕ ಭಂಡಾರವನ್ನು ತಕ್ಕರ ಮನೆಗೆ ಒಯ್ಯಲಾಯಿತು. ತಾ. 19 ರಂದು ಐತಿಹಾಸಿಕ ಖಡ್ಗಗಳೊಂದಿಗೆ ಸಾಂಪ್ರಾದಾಯಿಕ ಉಡುಗೆಯಲ್ಲಿ ನಾಡಿನವರು ಕುಣಿಯುತ್ತಾ, ದುಡಿಪಾಟ್ ಸಹಿತ ಗೌಡಂಡ ಕುಟುಂಬದ ಭಂಡಾರ ಮನೆಗೆ ಬಂದು, ಅಲ್ಲಿ ಖಡ್ಗಗಳನ್ನು ಸಂಗ್ರಹಿಸಿಡುವದರೊಂದಿಗೆ ವಾರ್ಷಿಕೋತ್ಸವ ಸಮಾಪ್ತಿ ಗೊಂಡಿತು.
-ಪವನ್ ಸಿ.ಎಸ್.