ಮಡಿಕೇರಿ, ಏ. 20: ಪ್ರಾದೇಶಿಕ ಪಕ್ಷವಾಗಿ ರೂಪು ಗೊಂಡು ರೈತರ, ಬಡವರ್ಗದ ಬೆಂಬಲ ದೊಂದಿಗೆ ಬೆಳವಣಿಗೆ ಕಂಡು ರಾಷ್ಟ್ರಕ್ಕೆ ಪ್ರಧಾನಿಯನ್ನು ನೀಡಿದ ಹಾಗೂ ಕೆಲವು ಕಾಲ ರಾಜ್ಯಕ್ಕೆ ಮುಖ್ಯಮಂತ್ರಿ ಯನ್ನು ನೀಡಿದ ಜಾತ್ಯತೀತ ಜನತಾದಳ ಪಕ್ಷ ಕೊಡಗು ಜಿಲ್ಲೆಯಲ್ಲಿ ಅಷ್ಟೊಂದು ಆಳವಾಗಿ ಬೇರೂರದೇ ಇದ್ದರೂ ತನ್ನ ಛಾಪನ್ನು ಮೂಡಿಸಿದ ಪಕ್ಷವಾಗಿದೆ ಎನ್ನಬಹುದು. ಸಹಕಾರ ಕ್ಷೇತ್ರಗಳಿಂದ ಹಿಡಿದು, ರಾಜ್ಯ ವಿಧಾನ ಪರಿಷತ್‍ಗೆ ಪ್ರಭಾವಿ ನಾಯಕರನ್ನು ನೀಡಿದ ಪಕ್ಷವಾಗಿದೆ. ಇದೀಗ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪಕ್ಷದ ಸಾರಥ್ಯಕ್ಕಾಗಿ ನಾಯಕರುಗಳ ನಡುವಿನ ‘ಭಿನ್ನಮತ’ಗಳಿಂದಾಗಿ ಪಕ್ಷ ದೊಳಗೆಯೇ ಗೊಂದಲ ಸೃಷ್ಟಿಯಾಗಿದೆ. ಒಂದು ಕಡೆಯಿಂದ ಪಕ್ಷದ ಜಿಲ್ಲಾಧ್ಯಕ್ಷರ ಬದಲಾವಣೆ ಯಾಗಬೇಕೆಂಬ ಕೂಗು, ಇತ್ತ ಅಧ್ಯಕ್ಷರ ಬದಲಾವಣೆಗೆ ಸಮ್ಮತಿ ಸದ ವರಿಷ್ಠರು, ಇನ್ನೊಂದು ಕಡೆಯಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ. ಉಸ್ತುವಾರಿ ಬಗಲಿಗೆ ಇದು ಸದ್ಯದ ಬೆಳವಣಿಗೆ.

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ವಿ.ಪಿ. ಶಶಿಧರ್ ಕಾಂಗ್ರೆಸ್‍ಗೆ ಮರಳಿದ ನಂತರ ಸೋಮವಾರಪೇಟೆ ತಾಲೂಕಿನ ಎಸ್.ಬಿ. ಭರತ್‍ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ವಿ.ಎಂ. ವಿಜಯ ಅವರನ್ನು ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷರನ್ನಾಗಿ ಹಾಗೂ ವಕೀಲ ಮೇರಿಯಂಡ ಸಂಕೇತ್ ಪೂವಯ್ಯ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಸಂಘಟನೆ ನಿಂತ ನೀರಿನಂತಾಗಿತ್ತು. ಮಾಜಿ ಸಚಿವ ಬಿ.ಎ. ಜೀವಿಜಯ ಅವರ ವರ್ಚಸ್ಸಿನ ಮೇರೆಗೆ ಕೆಲವು ಕಡೆ ಪಕ್ಷ ಗುರುತಿಸಿಕೊಂಡಿತ್ತು.

(ಮೊದಲ ಪುಟದಿಂದ) ಇನ್ನೂ ಕೆಲವು ಭಾಗಗಳಲ್ಲಿ ಸಂಕೇತ್ ಪೂವಯ್ಯ ಅವರ ಕಾರ್ಯಚಟುವಟಿಕೆ ಯಿಂದಾಗಿ ಪಕ್ಷದ ಹೆಸರು ಆಗಾಗ್ಗೆ ಕೇಳಿ ಬರುತ್ತಿತ್ತು.

ಅಧ್ಯಕ್ಷರ ಬದಲಾವಣೆ

ಒಂದೂವರೆ ವರ್ಷಗಳ ಪಕ್ಷದ ಕಾರ್ಯಚಟುವಟಿಕೆಗಳನ್ನು ಗಮನಿಸಿದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು, ಭರತ್‍ಕುಮಾರ್ ಅವರನ್ನು ಬದಲಾಯಿಸಿ, ಸಂಕೇತ್ ಪೂವಯ್ಯ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದರು. ಅಧ್ಯಕ್ಷರಾಗಿ ನೇಮಕಗೊಂಡ 2 ತಿಂಗಳ ಅವಧಿಯಲ್ಲಿ ಸಂಕೇತ್ ಅವರ ಕಾರ್ಯವೈಖರಿ ಮೂಲಕ ಪಕ್ಷದ ಹೆಸರು ಕೇಳಿ ಬರುವಂತಾಯಿತು. ಸದಸ್ಯತ್ವ ಅಭಿಯಾನ, ಬೂತ್ ಸಮಿತಿ ರಚನೆ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟ, ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದರು. ಈ ಪೈಕಿ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಹಾಗೂ ಕಾಡಾನೆ ಹಾವಳಿ ವಿರುದ್ಧದ ಹೋರಾಟಗಳು ಪ್ರಮುಖವಾಗಿದ್ದವು.

ಅಸಮಾಧಾನ

ಆದರೆ, ಸಂಕೇತ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿರುವದು ಪಕ್ಷದ ಇನ್ನಿತರ ಕೆಲ ನಾಯಕರಲ್ಲಿ ಅಸಮಾಧಾನ ಮೂಡಿಸಿತ್ತು. ಸೋಮವಾರಪೇಟೆ ಕಡೆಯಿಂದ ಮೊದಲು ಅಸಮಾಧಾನ ವ್ಯಕ್ತಗೊಂಡಿತು. ನಂತರದಲ್ಲಿ ಕುಮಾರಸ್ವಾಮಿಯವರು ದಕ್ಷಿಣ ಕೊಡಗಿಗೆ ಭೇಟಿ ನೀಡಿದ ಸಂದರ್ಭ ಕೆಲವು ಕಾರ್ಯಕರ್ತರು ಅಸಮಾಧಾನ ಹೊರಗೆಡಹಿ ಅಧ್ಯಕ್ಷರನ್ನು ಬದಲಾಯಿಸುವಂತೆ ಕೋರಿದ್ದರು. ಇದು ಸಹಜವಾಗಿಯೇ ಪಕ್ಷದಲ್ಲಿನ ಆಂತರಿಕ ಭಿನ್ನಮತ ಹೊರಬರಲು ಕಾರಣವಾಯಿತು.

ವರಿಷ್ಠರಲ್ಲಿ ಕೋರಿಕೆ

ಪಕ್ಷದ ನಾಯಕರು, ಕಾರ್ಯಕರ್ತರ ನಿಲುವಿನಿಂದ ಅಸಮಾಧಾನಿತರಾದ ಸಂಕೇತ್ ಪೂವಯ್ಯ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕಾದರೆ, ಕೆಲವೊಂದು ಕಠಿಣ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಬೇಕು, ಇಲ್ಲವಾದಲ್ಲಿ ರಾಜ್ಯಮಟ್ಟದಲ್ಲಿ ಯಾವದಾದರೂ ಸ್ಥಾನ ನೀಡುವಂತೆ ರಾಜ್ಯ ವರಿಷ್ಠರಿಗೆ ಕೋರಿಕೆ ಸಲ್ಲಿಸಿದ್ದರು. ಈ ಬಗ್ಗೆ ಬಹಿರಂಗಪಡಿಸಿದ್ದರೂ ಕೂಡ. ಆದರೆ ವರಿಷ್ಠರು ಅಧ್ಯಕ್ಷರ ಬದಲಾವಣೆ ಬಗ್ಗೆ ಯಾವದೇ ನಿರ್ಧಾರ ತಳೆಯದೆ ಬದಲಿಗೆ ವಿ.ಎಂ. ವಿಜಯ ಅವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ವಹಿಸಿದ್ದಾರೆ.

ಇದರಿಂದಾಗಿ ಮತ್ತೆ ಗೊಂದಲ ಸೃಷ್ಟಿಯಾದಂತಾಗಿದೆ. ಹಲವಷ್ಟು ಕಾರ್ಯಕರ್ತರು ಸಂಕೇತ್ ಪೂವಯ್ಯ ಅವರ ಪರವಾಗಿದ್ದರೆ, ಇನ್ನೂ ಕೆಲವರು ಅಸಮಾಧಾನಿತರ ಪಾಳಯದಲ್ಲಿದ್ದಾರೆ. ಈ ನಿಟ್ಟಿನಲ್ಲಿ ವರಿಷ್ಠರ ತೀರ್ಮಾನ ಏನೆಂಬದು ಕುತೂಹಲಕಾರಿಯಾಗಿದೆ..!

-ಕುಡೆಕಲ್ ಸಂತೋಷ್